ಬಿಹಾರ ಮೊದಲ ಹಂತದ ಚುನಾವಣೆ: ಐತಿಹಾಸಿಕ ಶೇ 65.08ರಷ್ಟು ಮತದಾನ ದಾಖಲೆ

ಪಾಟ್ನಾ : ಬಿಹಾರದಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ಶೇ 65.08ರಷ್ಟು ಮತದಾನವಾಗಿದ್ದು, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ದಾಖಲೆ ಮತದಾತವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮೊದಲ ಹಂತದ ಚುನಾವಣೆಯಲ್ಲಿ 3.75 ಕೋಟಿ ಜನರು ಮತದಾನ ಮಾಡಿದ್ದಾರೆ. 54,341 ಮತಗಟ್ಟೆಗಳಲ್ಲಿ 36,773 ಗ್ರಾಮೀಣ ಪ್ರದೇಶದ ಮತಗಟ್ಟೆಗಳಾಗಿದ್ದರು. ಕಣದಲ್ಲಿ 1,314 ಅಭ್ಯರ್ಥಿಗಳ ಚುನಾವಣಾ ಕಣದಲ್ಲಿದ್ದು, 1,192 ಪುರುಷರು ಮತ್ತು 122 ಮಹಿಳೆಯರಾಗಿದ್ದಾರೆ.

ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಮಾಹಿತಿಯ ಪ್ರಕಾರ, 65.08 ಶೇ ಮತದಾನವಾಗಿದ್ದು, ಇದು ಈವರೆಗೆ ಬಿಹಾರದಲ್ಲಿ ನಡೆದ ಐತಿಹಾಸಿಕ ಮತದಾನವಾಗಿದೆ. 2020ರಲ್ಲಿ ನಡೆದ ಮತದಾನದ ಶೇಕಡಾವಾರುಗಿಂತ ಶೇ 7.79 ರಷ್ಟು ಹೆಚ್ಚಾಗಿದೆ. ಆಗ ಶೇ 57.29ರಷ್ಟು ಮತದಾರರು ತಮ್ಮ ಮತ ಚಲಾಯಿಸಿದ್ದರು.

ಮತದಾನದಲ್ಲಿ 3.75 ಕೋಟಿ ಮತದಾರರರು ಭಾಗಿಯಾಗಿದ್ದು, 1.98 ಕೋಟಿ ಪುರುಷರು ಮತ್ತು 1.76 ಕೋಟಿ ಮಹಿಳೆಯರಾಗಿದ್ದಾರೆ. ಈ ಬಾರಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮುಜಫರ್ಪುರ ಮತ್ತು ಸಮಸ್ತಿಪುರ ಜಿಲ್ಲೆಗಳಲ್ಲಿ ಶೇ.70ಕ್ಕಿಂತ ಹೆಚ್ಚು ಮತದಾನ ದಾಖಲಾಗಿದೆ. ಮುಜಫರ್ಪುರದಲ್ಲಿ ಶೇ.71.81ರಷ್ಟು ಮತದಾನವಾಗಿದ್ದರೆ, ಸಮಸ್ತಿಪುರದಲ್ಲಿ ಶೇ.71.74 ರಷ್ಟು ಮತದಾನವಾಗಿದೆ.

ಮಾಧೇಪುರ ಶೇ 69.59, ಸಹರ್ಸಾ ಶೇ. 69.38, ವೈಶಾಲಿ ಶೇ 68.50 ಮತ್ತು ಖಗಾರಿಯಾ ಶೇ 67.90 ಹೆಚ್ಚಿನ ಮತದಾನ ದಾಖಲಾಗಿದೆ. ಪಟ್ನಾ ಜಿಲ್ಲೆಯಲ್ಲಿ ಶೇ.59.02 ರಷ್ಟು ಮತದಾನ ದಾಖಲಾಗಿದ್ದರೆ, ಲಖಿಸರೈ ಜಿಲ್ಲೆಯಲ್ಲಿ ಶೇ.64.98, ಮುಂಗೇರ್‌ನಲ್ಲಿ ಶೇ.62.74 ಮತ್ತು ಸಿವಾನ್‌ನಲ್ಲಿ ಶೇ. 60.61 ರಷ್ಟು ಮತದಾನ ದಾಖಲಾಗಿದೆ.

ದೇಶದ ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾದ ಬಿಹಾರದಲ್ಲಿ 18 ಜಿಲ್ಲೆಗಳ, 121 ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಿತು. 11 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಮುಜಫರ್‌ಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ.71.81 ರಷ್ಟು ಮತದಾನ ದಾಖಲಾಗಿದ್ದರೆ, 14 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪಟ್ನಾ ಜಿಲ್ಲೆಯಲ್ಲಿ ಕನಿಷ್ಠ ಶೇ. 59.02 ರಷ್ಟು ಮತದಾನ ದಾಖಲಾಗಿದೆ.

ಎರಡನೇ ಹಂತದ ಮತದಾನ ನವೆಂಬರ್ 11 ರಂದು ನಡೆಯಲಿದೆ. ಮತ ಎಣಿಕೆ ನವೆಂಬರ್ 14 ರಂದು ನಡೆದು, ಫಲಿತಾಂಶ ಹೊರಬೀಳಲಿದೆ.

ಬಿಹಾರದಲ್ಲಿ 2020ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ ಮತ್ತು ಜೆಡಿ (ಯು) ನೇತೃತ್ವದ ಎನ್‌ಡಿಎ 125 ಸ್ಥಾನಗಳನ್ನು ಗಳಿಸಿದರೆ, ಆರ್‌ಜೆಡಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ 110 ಸ್ಥಾನಗಳನ್ನು ಗೆದ್ದಿದ್ದವು. ಜೊತೆಗೆ ಇತರ ಪಕ್ಷಗಳು ಎಂಟು ಸ್ಥಾನಗಳನ್ನು ಗೆದ್ದವು. ಆರ್‌ಜೆಡಿ 75 ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿತ್ತು. ಬಿಜೆಪಿ 74 ಸ್ಥಾನಗಳನ್ನು ಗೆದ್ದಿತು ಮತ್ತು ಜೆಡಿ (ಯು) 43 ಸ್ಥಾನಗಳನ್ನು ಗಳಿಸಿತ್ತು.

Star Of Kudla

Learn More →

Leave a Reply

Your email address will not be published. Required fields are marked *