ಆಸ್ತಿ ಅಕ್ರಮ ತಡೆಗೆ ಬ್ಲಾಕ್‌ಚೈನ್ ಪರಿಹಾರ: ಕಾನೂನು ಆಯೋಗಕ್ಕೆ ಅಧ್ಯಯನ ನಡೆಸುವಂತೆ ಸುಪ್ರೀಂಕೋರ್ಟ್ ಸೂಚನೆ

ದೆಹಲಿ: ಆಸ್ತಿ ನೋಂದಣಿ ಹಾಗೂ ಮಾಲೀಕತ್ವದ ಪಾರದರ್ಶಕತೆ ಕಾಪಾಡಲು ಬ್ಲಾಕ್‌ಚೈನ್ ತಂತ್ರಜ್ಞಾನ ಅತಿ ಪರಿಣಾಮಕಾರಿ ಆಯ್ಕೆಯಾಗಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಕುರಿತಾಗಿ ಸವಿವರವಾದ ಅಧ್ಯಯನ ನಡೆಸುವಂತೆ ಕಾನೂನು ಆಯೋಗಕ್ಕೆ ನ್ಯಾಯಾಲಯ ಸೂಚಿಸಿದೆ.

ನ್ಯಾಯಮೂರ್ತಿಗಳು ಪಿ.ಎಸ್. ನರಸಿಂಹ ಮತ್ತು ಜೋಯ್ಮಲ್ಯ ಅವರಿದ್ದ ಪೀಠವು, “ಭೂ ದಾಖಲೆಗಳ ಸುರಕ್ಷತೆ, ಪಾರದರ್ಶಕತೆ ಮತ್ತು ವಂಚನೆ ತಡೆಗೆ ಬ್ಲಾಕ್‌ಚೈನ್ ವ್ಯವಸ್ಥೆ ಮಹತ್ವದ ಪಾತ್ರವಹಿಸಬಹುದು. ಇದನ್ನು ದೇಶಾದ್ಯಂತ ಅಳವಡಿಸುವ ಕುರಿತು ಕಾನೂನು ಆಯೋಗ ಪರಿಶೀಲಿಸಬೇಕು” ಎಂದು ತಿಳಿಸಿದೆ.

ಭಾರತದಲ್ಲಿ ದಾಖಲಾಗಿರುವ ಸಿವಿಲ್‌ ಪ್ರಕರಣಗಳಲ್ಲಿ ಶೇಕಡಾ 66 ರಷ್ಟು ಆಸ್ತಿ ವಿವಾದಗಳಿಗೆ ಸಂಬಂಧಿಸಿದೆ. ನಕಲಿ ದಾಖಲೆಗಳು, ಅತಿಕ್ರಮಣ, ಮಧ್ಯವರ್ತಿಗಳ ಹಸ್ತಕ್ಷೇಪ ಮತ್ತು ಪರಿಶೀಲನಾ ವಿಳಂಬಗಳು ಆಸ್ತಿ ವ್ಯವಹಾರಗಳ ವಿಶ್ವಾಸಾರ್ಹತೆಯನ್ನು ಕುಂದಿಸಿವೆ ಎಂದು ಕೋರ್ಟ್‌ ಉಲ್ಲೇಖಿಸಿದೆ.

ಪೀಠದ ಪ್ರಕಾರ, ಬ್ಲಾಕ್‌ಚೈನ್ ಅಳವಡಿಸಿಕೊಂಡರೆ ಆಸ್ತಿ ಮಾಲೀಕತ್ವ ಬದಲಾವಣೆಯ ಪಾರದರ್ಶಕತೆ ಹೆಚ್ಚಿ, ವಂಚನೆ ಪತ್ತೆಹಚ್ಚುವುದು ಸುಲಭವಾಗುತ್ತದೆ. ಒಮ್ಮೆ ಬ್ಲಾಕ್‌ಚೈನ್ ಲೆಡ್ಜರ್‌ನಲ್ಲಿ ದಾಖಲಾಗಿದ ಮಾಹಿತಿಯನ್ನು ನಿಜವಾದ ಮಾಲೀಕರ ಅನುಮತಿ ಇಲ್ಲದೆ ಬದಲಾಯಿಸಲಾಗುವುದಿಲ್ಲ.

ಈ ತಂತ್ರಜ್ಞಾನವು ಭೂ ಶೀರ್ಷಿಕೆ, ಮಾಲೀಕತ್ವದ ಇತಿಹಾಸ, ಆದಾಯ ದಾಖಲೆ ಮತ್ತು ಕ್ಯಾಡಾಸ್ಟ್ರಲ್ ನಕ್ಷೆಗಳನ್ನು ಒಂದೇ ಚೌಕಟ್ಟಿನಲ್ಲಿ ಸಂಯೋಜಿಸಬಹುದು. ಇದರಿಂದ ಹಲವು ಇಲಾಖೆಗಳು ಒಂದೇ ವೇದಿಕೆಯಲ್ಲಿ ದಾಖಲೆ ಪರಿಶೀಲನೆ ನಡೆಸಲು ಸಾಧ್ಯವಾಗುತ್ತದೆ.

ಕೋರ್ಟ್‌ ಹೇಳುವಂತೆ, ಈ ವ್ಯವಸ್ಥೆ ಅಳವಡಿಸಲು ಆಸ್ತಿ ವರ್ಗಾವಣೆ ಕಾಯ್ದೆ (1882), ನೋಂದಣಿ ಕಾಯ್ದೆ (1908), ಸ್ಟ್ಯಾಂಪ್ ಕಾಯ್ದೆ (1899), ಸಾಕ್ಷ್ಯ ಕಾಯ್ದೆ (1872), ಮಾಹಿತಿ ತಂತ್ರಜ್ಞಾನ ಕಾಯ್ದೆ (2000) ಮತ್ತು ದತ್ತಾಂಶ ಸಂರಕ್ಷಣಾ ಕಾಯ್ದೆ (2023) ಗಳನ್ನು ಪರಿಷ್ಕರಿಸುವ ಅಗತ್ಯವಿದೆ.

ಬ್ಲಾಕ್‌ಚೈನ್ ಪ್ರಕ್ರಿಯೆಯ ಮಾದರಿ:
ಆಸ್ತಿ ಮಾರಾಟ ಅಥವಾ ನೋಂದಣಿಗೆ ಬರುವ ಮಾರಾಟಗಾರರು ಮತ್ತು ಖರೀದಿದಾರರು ಮೊದಲಿಗೆ ಆಧಾರ್‌ ಆಧಾರಿತ ಕೀ ಕಾರ್ಡ್ ಸೃಜಿಸಬೇಕಾಗುತ್ತದೆ. ಇದು ಎಟಿಎಂ ಕಾರ್ಡ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ಬಳಿಕ ಸಬ್‌-ರಿಜಿಸ್ಟ್ರಾರ್ ಕಚೇರಿಯಲ್ಲಿ ಇ-ಕೆವೈಸಿ ಮೂಲಕ ಆಧಾರ್ ಹಾಗೂ ಬಯೋಮೆಟ್ರಿಕ್ ಮಾಹಿತಿ ದಾಖಲಿಸಲಾಗುತ್ತದೆ. ನಂತರ, ಇಬ್ಬರಿಗೂ ಪ್ರತ್ಯೇಕ ಪಾಸ್‌ವರ್ಡ್ ನೀಡಲಾಗುತ್ತದೆ ಮತ್ತು ನೋಂದಣಿಯ ವೇಳೆ ಅವರ ಡಿಜಿಟಲ್ ಸಹಿ ಹಾಗೂ ಬಯೋಮೆಟ್ರಿಕ್ ದೃಢೀಕರಣ ಪಡೆಯಲಾಗುತ್ತದೆ.

ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಂತೆ, ಈ ಕ್ರಮ ಜಾರಿಗೆ ಬಂದರೆ ಆಸ್ತಿ ದಾಖಲೆಗಳ ಸುರಕ್ಷತೆ, ಪಾರದರ್ಶಕತೆ ಮತ್ತು ಮೋಸ ತಡೆಗಟ್ಟುವಿಕೆಯಲ್ಲಿ ಮಹತ್ವದ ಬದಲಾವಣೆಯನ್ನು ತರಲಿದೆ.

Star Of Kudla

Learn More →

Leave a Reply

Your email address will not be published. Required fields are marked *