ಹಾಸ್ಟೆಲ್‌ನ ಸ್ನಾನಗೃಹದಲ್ಲಿ ರಹಸ್ಯ ಕ್ಯಾಮೆರಾ ಅಳವಡಿಕೆ: ತಮಿಳುನಾಡಿನಲ್ಲಿ ಮಹಿಳೆ ಮತ್ತು ಆಕೆಯ ಸ್ನೇಹಿತ ಬಂಧನ

ತಮಿಳುನಾಡು: ಮಹಿಳಾ ಹಾಸ್ಟೆಲ್‌ನ ಸ್ನಾನಗೃಹದಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿದ್ದ ಆಘಾತಕಾರಿ ಪ್ರಕರಣ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆರೋಪಿಗಳಾದ ಹಾಸ್ಟೆಲ್‌ನಲ್ಲೇ ಇದ್ದ ಮಹಿಳೆ ಹಾಗೂ ಆಕೆಯ ಬೆಂಗಳೂರು ಮೂಲದ ಸ್ನೇಹಿತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಕೃಷ್ಣಗಿರಿ ಜಿಲ್ಲೆಯ ಹೊಸೂರಿನ ನಾಗಮಂಗಲಂನಲ್ಲಿರುವ ಮಹಿಳಾ ಹಾಸ್ಟೆಲ್‌ನ ಬಾತ್​ ರೂಂನಲ್ಲಿ ನವೆಂಬರ್ 2ರಂದು ಗುಪ್ತ ಕ್ಯಾಮೆರಾ ಅಳವಡಿಸಲಾಗಿತ್ತು. ಅಲ್ಲಿನ ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್​​ನಲ್ಲಿ ಉದ್ಯೋಗದಲ್ಲಿರುವ ನೂರಾರು ಮಹಿಳಾ ಉದ್ಯೋಗಿಗಳು ವಿಡಿಯಾಲ್ ರೆಸಿಡೆನ್ಸಿ ಎಂಬ ಕಂಪನಿಯ ಹಾಸ್ಟೆಲ್‌ನಲ್ಲಿ ವಾಸ್ತವ್ಯವಿದ್ದಾರೆ. ಅಲ್ಲಿನ ಸ್ನಾನಗೃಹವೊಂದರಲ್ಲಿ ಗುಪ್ತ ಕ್ಯಾಮೆರಾ ಪತ್ತೆಯಾಗಿದೆ. ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಕಟ್ಟಡದ 11ನೇ ಮಹಡಿಯು 8 ಬ್ಲಾಕ್‌ಗಳನ್ನು ಹೊಂದಿದ್ದು, ಅಲ್ಲಿ 6,000ಕ್ಕೂ ಹೆಚ್ಚು ಮಹಿಳೆಯರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರಕರಣ ಸಂಬಂಧ ನಾಗಮಂಗಲಂನಲ್ಲಿರುವ ಕಂಪನಿಯ ಉದ್ಯೋಗಿಯಾಗಿದ್ದ ಒಡಿಶಾ ಮೂಲದ ಆರೋಪಿ 22 ವರ್ಷದ ನೀಲುಕುಮಾರಿ ಗುಪ್ತಾ ಕೂಡ ಇದೇ ಹಾಸ್ಟೆಲ್‌ನಲ್ಲಿ ತಂಗಿದ್ದರು. ಆಕೆಯು ತಮ್ಮ ಪುರುಷ ಸ್ನೇಹಿತ, ಬೆಂಗಳೂರು ಮೂಲದ ಸಂತೋಷ್ (25) ಎಂಬಾತನ ಸೂಚನೆ ಮೇರೆಗೆ ಕ್ಯಾಮೆರಾ ಅಳವಡಿಸಿದ್ದರು. ಸದ್ಯ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಪಿ.ತಂಗದುರೈ ಅವರು ಮಾಹಿತಿ ನೀಡಿ, ”ನವೆಂಬರ್ 5ರಂದು ಉದನಪಲ್ಲಿಯ ಪೊಲೀಸರ ತಂಡವು ಸಂತೋಷ್ ಅವರನ್ನು ಬೆಂಗಳೂರಿನಲ್ಲಿ ಬಂಧಿಸಿದೆ. ನವೆಂಬರ್ 2ರಂದು ಉತ್ತರ ಭಾರತದ ರಾಜ್ಯಗಳ ಮಹಿಳೆಯರು ವಾಸಿಸುತ್ತಿದ್ದ ಕೋಣೆಯ ಸ್ನಾನಗೃಹದಲ್ಲಿ ಕ್ಯಾಮೆರಾ ಅಳವಡಿಸಿರುವುದು ಕಂಡುಬಂದಿದೆ. ನೀಲುಕುಮಾರಿ ಕೂಡ ಅಲ್ಲಿಯೇ ತಂಗಿದ್ದರು” ಎಂದು ತಿಳಿಸಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *