ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಮನೆಗೆ ನುಗ್ಗಿ ₹15 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ

ಬೆಂಗಳೂರು: ಪರಿಚಯವೇ ಇಲ್ಲದವರು ಮನೆಗೆ ಆಹ್ವಾನ ಪತ್ರಿಕೆ ನೀಡುವ ಸೋಗಿನಲ್ಲಿ ಮನೆಗೆ ಬಂದು, ಹಾಡಹಗಲೇ ಮನೆ ಮಾಲೀಕರ ಕೈಕಾಲು ಕಟ್ಟಿ ಹಾಕಿ 200 ಗ್ರಾಂ ಚಿನ್ನಾಭರಣ ದೋಚಿದ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್‌ ಠಾಣೆಯ ವ್ಯಾಪ್ತಿಯ ನೆರಳೂರು ಗ್ರಾಮದಲ್ಲಿ ಬುಧವಾರ ನಡೆದಿದೆ.ನೆರಳೂರು ಗ್ರಾಮದ ನಿವಾಸಿಗಳಾದ ನಾಗವೇಣಿ ಮತ್ತು ರವಿಕುಮಾರ್‌ ಅವರ ಮನೆಗೆ ಆಹ್ವಾನ ಪತ್ರಿಕೆ ನೀಡಲು ಬಂದವರಂತೆ ನಟಿಸಿ ಕಳ್ಳರು ಕೃತ್ಯ ಎಸಗಿದ್ದಾರೆ.ರವಿಕುಮಾರ್‌ ಖಾಸಗಿ ಕಂಪನಿಯಲ್ಲಿನ ಉದ್ಯೋಗಿಯಾಗಿದ್ದಾರೆ. ಮನೆಯಲ್ಲಿ ನಾಗವೇಣಿ ಒಬ್ಬರೇ ಇರುವುದನ್ನು ಗಮನಿಸಿದ ಮೂವರು ದುಷ್ಕರ್ಮಿಗಳು, ದರೋಡೆಗೆ ಸ್ಕೆಚ್ ಹಾಕಿದ್ದರು. ಬಂದವರು ಪರಿಚಿತರಿರಬಹುದು ಎಂದು ನಾಗವೇಣಿ ಮನೆ ಬಾಗಿಲು ತೆಗೆದಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಕುಡಿಯಲು ನೀರು ಕೇಳಿದ್ದಾರೆ. ನಾಗವೇಣಿ ಅಡುಗೆ ಮನೆಗೆ ಹೋದಾಗ ಇಬ್ಬರು ಪುರುಷರಲ್ಲಿ ಒಬ್ಬ ಅಡುಗೆ ಮನೆಗೆ ಒಳಗೆ ನುಗ್ಗಿ ನಾಗವೇಣಿ ಅವರ ಕೈಕಾಲು ಕಟ್ಟಿ ಹಾಕಿದ್ದಾರೆ. ಕತ್ತಿಗೆ ಚಾಕು ಇಟ್ಟು ಹೆದರಿಸಿ, ಬೀರುವಿನ ಲಾಕರ್‌ ಕೀ ಪಡೆದು 200 ಗ್ರಾಂ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದಾರೆ.ನಾಗವೇಣಿ ಅವರ ಕತ್ತಿಗೆ ಚಾಕು ಇರಿಸಿ ಚಿನ್ನದ ನೆಕ್‌ಲೆಸ್‌, ಓಲೆ, ಎರಡು ನೆಕ್‌ ಚೈನ್‌, ಉಂಗುರ, ಲಾಂಗ್‌ ಚೈನ್‌, 8 ಬೆಳ್ಳಿಯ ಕಾಲ್ಗೆಜ್ಜೆಗಳು, ಕುಂಕುಮ ಬಟ್ಟಲನ್ನು ದುಷ್ಕರ್ಮಿಗಳು ದರೋಡೆ ಮಾಡಿದ್ದಾರೆ. ಅಂದಾಜು ₹15 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.ಎಎಸ್ಪಿ ವೆಂಕಟೇಶ್‌ ಪ್ರಸನ್ನ, ಡಿವೈಎಸ್ಪಿ ಮೋಹನ್‌ ಕುಮಾರ್, ಸರ್ಕಲ್‌ ಇನ್‌ಸ್ಪೆಕ್ಟರ್‌ ಮಂಜುನಾಥ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತ್ತಿಬೆಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *