ಪುತ್ತೂರು: ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲ ಧರ್ಮಗಳ ಜನ ಬಾಳ್ವೆಯಿಂದ ಬದುಕುವುದೇ ಕನ್ನಡ ನಾಡಿನ ಹೆಗ್ಗುರುತಾಗಿದೆ. ಈ ಪರಂಪರೆ ಉಳಿಸಿಕೊಂಡು ಹೋಗುವುದೇ ಕನ್ನಡ ರಾಜ್ಯೋತ್ಸವಕ್ಕೆ ನೀಡುವ ನಿಜವಾದ ಅರ್ಥ ಎಂದು ಶಾಸಕ ಅಶೋಕ್ ರೈ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ನೇತೃತ್ವದ ಮತ್ತು ನಾನಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಪುತ್ತೂರು ಪುರಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡ ನಮ್ಮ ಗುರುತಿನ ಭಂಡಾರವಾಗಿದೆ. ಅನೇಕ ಧರ್ಮಗಳಿದ್ದರೂ ಸಾಂಸ್ಕಂತಿಕವಾಗಿ ನಾವೆಲ್ಲ ಕನ್ನಡಿಗರು. ಇಲ್ಲಿರುವ ಎಲ್ಲ ಭಾಷೆಗಳೂ ಕನ್ನಡ ನಾಡಿನಲ್ಲಿ ಹುಲುಸಾಗಿ ಬೆಳೆದು ನಾಡು ನುಡಿಗೆ ಕೊಡುಗೆ ನೀಡಿವೆ. 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡ ದೇಶ ಅಗ್ರಮಾನ್ಯ ಭಾಷೆ ನಮ್ಮದು. ಬೇರೆ ಭಾಷೆಗಳನ್ನು ನಾವು ಕಲಿಯುವುದು ತಪ್ಪಲ್ಲ. ಆದರೆ ಮಾತೃಭಾಷೆ- ನಾಡ ಭಾಷೆಗೆ ಮೊದಲ ಗೌರವ ನೀಡಬೇಕು ಎಂದವರು ಹೇಳಿದರು.
ರಾಜ್ಯ ಸರಕಾರ ಪಂಚ ಗ್ಯಾರಂಟಿ ಮೂಲಕ ಜನರಿಗೆ ನೆಮ್ಮದಿಯ ಬದುಕು ನೀಡಿದೆ. ಪುತ್ತೂರಿನಲ್ಲಿ ಅಭಿವೃದ್ಧಿಯ ಪರ್ವ ನಡೆಯುತ್ತಿದೆ. ರಾಜ್ಯದಲ್ಲಿ 2400 ಕೋಟಿ ರೂ.ಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್‍ಗಳಿಗೆ ಮೀಸಲಿಟ್ಟಿದ್ದು, ಪುತ್ತೂರು ಕ್ಷೇತ್ರಕ್ಕೆ ಹೊಸದಾಗಿ 3 ಕೆಪಿಎಸ್‍ಗಳು ಬಂದಿವೆ. ಒಟ್ಟು 5 ಕೆಪಿಎಸ್‍ಗಳು ಪುತ್ತೂರಿಗೆ ಸಿಕ್ಕಂತಾಗಿದೆ. ಮುಂದಿನ 10 ದಿನಗಳಲ್ಲಿ ಕ್ಷೇತ್ರದ ರಸ್ತೆಗಳ ದುರಸ್ತಿ ಆರಂಭಿಸಲಾಗುವುದು ಎಂದವರು ತಿಳಿಸಿದರು.


ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಡಾ.ಜೆ.ಸಿ.ಅಡಿಗ(ವೈದ್ಯಕೀಯ), ಪ್ರೊ.ಝೇವಿಯರ್ ಡಿಸೋಜ(ಶಿಕ್ಷಣ), ಡಾ.ರಾಜೇಶ್ ಬೆಜ್ಜಂಗಳ(ಸಾಹಿತ್ಯ), ಉದಯ ಕುಮಾರ್ ಯು.ಎಲ್.(ಪತ್ರಿಕೋದ್ಯಮ), ಎಂ.ವಾಸುದೇವ ಆಚಾರ್ಯ(ಶಿಲ್ಪಕಲೆ), ಅಬೂಬಕ್ಕರ್ ಮಲಾರ್(ಸಮಾಜ ಸೇವೆ), ರಮೇಶ್ ಉಳಯ(ಶಿಕ್ಷಣ), ಸಂಶುದ್ದೀನ್ ಸಾಲ್ಮರ(ಸಮಾಜ ಸೇವೆ), ಬಾಲಕೃಷ್ಣ ಪೂಜಾರಿ ಪಲ್ಲತ್ತಾರ್(ದೈವಾರಾಧನೆ), ವಿನೋದ್ ರೈ(ಯಕ್ಷಗಾನ), ಪವಿತ್ರಾ ಹೆಗ್ಡೆ(ರಂಗಭೂಮಿ), ಅಬೂಬಕ್ಕರ್ ಆರ್ಲಪದವು (ಗಡಿನಾಡ ಕನ್ನಡ ಸೇವೆ), ನರೇಂದ್ರ ರೈ ದೇರ್ಲ(ಸಾಹಿತ್ಯ), ಜೆಸಿಐ ಪುತ್ತೂರು (ಸಂಘಸಂಸ್ಥೆ) ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪೈಕಿ ನರೇಂದ್ರ ರೈ ದೇರ್ಲ ಗೈರು ಹಾಜರಾಗಿದ್ದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ದರ್ಬೆ ವೃತ್ತದಲ್ಲಿ ಕನ್ನಡ ಭುವನೇಶ್ವರಿ ಮೆರವಣಿಗೆಗೆ ಶಾಸಕರು ಚಾಲನೆ ನೀಡಿದರು. ಭುವನೇಶ್ವರಿ ರಥದೊಂದಿಗೆ ನೂರಾರು ಸಂಖ್ಯೆಯ ಕನ್ನಡಾಭಿಮಾನಿಗಳು ಕನ್ನಡ ಶಾಲು ಧರಿಸಿಕೊಂಡು ಚೆಂಡೆ ಮೇಳದೊಂದಿಗೆ ಹೆಜ್ಜೆ ಹಾಕುತ್ತಾ ಕಿಲ್ಲೆ ಮೈದಾನ ಸೇರಿದರು. ಆರಂಭದಲ್ಲಿ ಮಂಗಲ್‍ಪಾಂಡೆ ಚೌಕ್‍ನಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲಾಯಿತು. ಬಳಿಕ ಪುರಭವನದ ಎದುರು ಕನ್ನಡ ಧ್ವಜಾರೋಹಣ ಮಾಡಲಾಯಿತು.
ವೇದಿಕೆಯಲ್ಲಿ ಪ್ರಭಾರ ತಹಸೀಲ್ದಾರ್ ನಾಗರಾಜ್,ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ತಾಪಂ ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಕುಮಾರ್ ಭಂಡಾರಿ, ನಗರಸಭೆ ಪೌರಾಯುಕ್ತೆ ವಿದ್ಯಾ ಎಂ.ಕಾಳೆ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷ ಉಮೇಶ್ ನಾಯಕ್ ಉಪಸ್ಥಿತರಿದ್ದರು.


