
ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸದೆ ವಿಪರೀತ ಕುಡಿತದ ಚಟಕ್ಕೆ ದಾಸನಾದ ಪತಿಯ ನಡವಳಿಕೆ ಕೂಡ ಹಿಂದೂ ವಿವಾಹ ಕಾಯ್ದೆಯ ಅಡಿಯಲ್ಲಿ ವಿಚ್ಛೇದನಕ್ಕೆ ಕಾರಣವಾಗುವ ‘ಕ್ರೌರ್ಯ’ ವ್ಯಾಪ್ತಿಯಲ್ಲಿ ಪರಿಗಣಿಸಲ್ಪಡುತ್ತದೆ ಎಂದು ಛತ್ತೀಸ್‌ಗಢ ಹೈಕೋರ್ಟ್ ತೀರ್ಪು ನೀಡಿದೆ.
ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಗೌತಮ್ ಭಾಧುರಿ ಹಾಗೂ ಸಂಜಯ್ ಎಸ್. ಅಗರ್ವಾಲ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ವಿಚ್ಛೇದನ ಕೋರಿ ಪತ್ನಿ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿರುವ ಹೈಕೋರ್ಟ್, ವಿಚ್ಛೇದಿತ ಪತ್ನಿಗೆ ಮಾಸಿಕ ₹15,000 ಜೀವನಾಂಶ ಪಾವತಿಸಲು ಪತಿಗೆ ಆದೇಶಿಸಿದೆ.
ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸದೆ ಅತಿಯಾದ ಮದ್ಯಪಾನ ಮಾಡುವ ಪತಿ ಮನೆಯ ಸ್ಥಿತಿಯನ್ನು ಹದಗೆಡಿಸುತ್ತಾನೆ. ಪತಿಯ ಈ ನಡವಳಿಕೆಯು ಸಹಜವಾಗಿಯೇ ಪತ್ನಿ ಹಾಗೂ ಮಕ್ಕಳನ್ನು ಹಿಂಸೆಗೊಳಪಡಿಸುತ್ತದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ದಾಂಪತ್ಯದಿಂದ ಮಕ್ಕಳು ಜನಿಸಿದಾಗ ಪತಿಯ ಹೊಣೆಗಾರಿಕೆ ಹೆಚ್ಚಾಗುತ್ತದೆ. ಅದರಲ್ಲೂ ಪತ್ನಿಯು ಗೃಹಿಣಿಯಾಗಿದ್ದರೆ, ಪತಿಯು ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ:
2006ರಲ್ಲಿ ವಿವಾಹವಾದ ದಂಪತಿಗೆ 13 ವರ್ಷದ ಮಗಳು ಹಾಗೂ 10 ವರ್ಷದ ಮಗನಿದ್ದು, ಪತಿ ಮದ್ಯ ವ್ಯಸನಿಯಾಗಿದ್ದ. ಪತಿಯ ವಿಪರೀತ ಮದ್ಯ ವ್ಯಸನಕ್ಕೆ ಬೇಸತ್ತ ಪತ್ನಿ ಮಾನಸಿಕ ಕ್ರೌರ್ಯದ ಅಡಿಯಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯಲ್ಲಿ ಪತಿ ಕುಡಿತಕ್ಕೆ ದಾಸನಾಗಿದ್ದು, ಮದ್ಯಪಾನಕ್ಕಾಗಿ ಮನೆಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾನೆ, ಮನೆ ಖರ್ಚಿಗೆ ಹಾಗೂ ಮಕ್ಕಳ ಶಿಕ್ಷಣಕ್ಕೆ ಹಣ ನೀಡುತ್ತಿಲ್ಲ. ಪಾನಮತ್ತನಾಗಿ ಬಂದು ತನ್ನ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಕ್ಕಳೊಡನೆ ತವರು ಮನೆಗೆ ಹೋಗುವಂತೆ ಬಲವಂತ ಮಾಡುತ್ತಿದ್ದಾನೆ ಎಂದು ಪತ್ನಿ ಆರೋಪಿಸಿದ್ದರು.
ಕೌಟುಂಬಿಕ ನ್ಯಾಯಾಲಯವು “ಮದ್ಯಪಾನದಿಂದ ಮಾತ್ರ ಮಾನಸಿಕ ಕ್ರೌರ್ಯ ಉಂಟಾಗುವುದಿಲ್ಲ” ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪತ್ನಿ ಛತ್ತೀಸ್‌ಗಢ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್, ಪತಿಯ ಮದ್ಯ ವ್ಯಸನದಿಂದ ಮನನೊಂದು ಪತ್ನಿ ಅರ್ಜಿ ಸಲ್ಲಿಸಿದಾಗ ಪತಿಯು “ಮದ್ಯಪಾನ ಬಿಡುತ್ತೇನೆ” ಎಂದು ಹೇಳಿ ಆಕೆಯಿಂದ ಅರ್ಜಿ ಹಿಂಪಡೆಯುವಂತೆ ಮಾಡಿದ್ದರೂ, ಬಳಿಕ ನಡವಳಿಕೆಯಲ್ಲಿ ಬದಲಾವಣೆ ತರಲಿಲ್ಲವೆಂದು ಕಂಡು, ಪತ್ನಿಯ ಆರೋಪಗಳನ್ನು ಸವಾಲು ಮಾಡದೇ ಇರುವ ಕಾರಣ ಅವು ನಿಜವೆಂದು ಪರಿಗಣಿಸಿತು.
ಇದನ್ನೆಲ್ಲ ಪರಿಗಣಿಸಿ ಹೈಕೋರ್ಟ್ ವಿಚ್ಛೇದನ ನೀಡಿದ್ದು, ಮಕ್ಕಳ ಶಿಕ್ಷಣ ಮತ್ತು ಪಾಲನೆಗಾಗಿ ಪತಿಗೆ ಮಾಸಿಕ ₹15,000 ಪಾವತಿಸಲು ಆದೇಶಿಸಿದೆ.


