ಮಂಗಳೂರು : ಇ-ಆಟೋಗಳಿಗೆ ಪರವಾನಗಿ ಕಡ್ಡಾಯ – ಅನುಮತಿ ಇಲ್ಲದ ವಾಹನಗಳಿಗೆ ನಗರ ಪ್ರವೇಶ ನಿಷೇಧ

ಮಂಗಳೂರು: ಆಟೋ ರಿಕ್ಷಾ ಸಂಚಾರವನ್ನು ನಿಯಂತ್ರಿಸುವ ಹಾಗೂ ಎಲೆಕ್ಟ್ರಿಕ್ ವಾಹನಗಳ ಸಂಚಾರವನ್ನು ಶಿಸ್ತಿನಿಂದ ನಿಭಾಯಿಸುವ ಉದ್ದೇಶದಿಂದ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್. ವಿ ಅವರು ಜಿಲ್ಲೆಯಲ್ಲಿನ ಎಲ್ಲಾ ಬ್ಯಾಟರಿ ಚಾಲಿತ ಆಟೋಗಳಿಗೆ ಪರವಾನಗಿ ಪಡೆಯುವುದು ಕಡ್ಡಾಯ ಎಂದು ಆದೇಶಿಸಿದ್ದಾರೆ.

ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮಗಳು 1989ರ ನಿಯಮ 221(ಎ)(5)ರಡಿ ಹೊರಡಿಸಿರುವ ಈ ಆದೇಶದ ಮೂಲಕ, 2024ರ ಜುಲೈ 26ರಂದು ಹೊರಡಿಸಿದ್ದ ‘ಇ-ಆಟೋಗಳು ಹಾಗೂ ಮೆಥನಾಲ್, ಇಥನಾಲ್ ಇಂಧನ ಬಳಸುವ ವಾಹನಗಳಿಗೆ ಮುಕ್ತ ಸಂಚಾರ’ ನೀಡಿದ ಹಿಂದಿನ ಆದೇಶವನ್ನು ರದ್ದುಪಡಿಸಲಾಗಿದೆ.

ಹೊಸ ಪ್ರಕಟಣೆಯ ಪ್ರಕಾರ, 2002ರ ಜನವರಿ 20ರಿಂದ 2025ರ ಅಕ್ಟೋಬರ್ 30ರೊಳಗೆ ನೋಂದಾಯಿತ ಬ್ಯಾಟರಿ ಚಾಲಿತ ಆಟೋಗಳು ಮಂಗಳೂರು ನಗರ ಹಾಗೂ ಉಳ್ಳಾಲ ವ್ಯಾಪ್ತಿಯ (ಝೋನ್ 1) ಒಳಗೆ ಕಾರ್ಯನಿರ್ವಹಿಸಲು ಬಯಸಿದರೆ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (ಆರ್‌ಟಿಎ)ಯಿಂದ ಮಾನ್ಯ ಪರವಾನಗಿ ಪಡೆಯಬೇಕಾಗಿದೆ. ಈ ನಿರ್ಧಾರವು 2025ರ ಆಗಸ್ಟ್ 18ರಂದು ನಡೆದ ಆರ್‌ಟಿಎ ಸಭೆಯ ಚರ್ಚೆಯ ಬಳಿಕ ರೂಪುಗೊಂಡಿದೆ.

ಝೋನ್ 1 ಆಟೋಗಳು ಆಕಾಶ ನೀಲಿ ಬಣ್ಣದ ಚೌಕಾಕಾರದ ಗುರುತು ಮತ್ತು ಪೊಲೀಸ್ ಇಲಾಖೆ ನೀಡುವ ಗುರುತು ಸಂಖ್ಯೆಯನ್ನು ಹೊಂದಿರಬೇಕು. ಇವು ಝೋನ್ 1 ವ್ಯಾಪ್ತಿಯೊಳಗಿನ ನಿಗದಿತ ಆಟೋ ನಿಲ್ದಾಣಗಳಲ್ಲಷ್ಟೇ ಸಂಚರಿಸಬೇಕು.

ಝೋನ್ 2 (ಗ್ರಾಮೀಣ ಪ್ರದೇಶ)ಗಳಿಗೆ 2025ರ ಅಕ್ಟೋಬರ್ 30ರ ನಂತರ ನೋಂದಾಯಿಸಲ್ಪಡುವ ಎಲ್ಲ ಇ-ಆಟೋಗಳನ್ನು ಗ್ರಾಮೀಣ ಪರವಾನಗಿ ಹೊಂದಿದ ಆಟೋಗಳೆಂದು ಪರಿಗಣಿಸಲಾಗುವುದು. ಇವು ನಗರ (ಝೋನ್ 1) ವ್ಯಾಪ್ತಿಗೆ ಪ್ರವೇಶಿಸಬಾರದು ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಷ್ಟೇ ಸಂಚರಿಸಬೇಕು. ಈ ವಾಹನಗಳನ್ನು ಹಳದಿ ವೃತ್ತಾಕಾರದ ಸ್ಟಿಕ್ಕರ್ ಹಾಗೂ ಪೊಲೀಸ್ ಗುರುತು ಸಂಖ್ಯೆ ಮೂಲಕ ಗುರುತಿಸಲಾಗುವುದು.

“ಮಾನ್ಯ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಎಲ್ಲ ಇ-ಆಟೋ ಮಾಲೀಕರು ತಕ್ಷಣವೇ ತಮ್ಮ ವಾಹನಗಳನ್ನು ಕಾನೂನುಬದ್ಧಗೊಳಿಸಬೇಕು,” ಎಂದು ಡಿಸಿ ದರ್ಶನ್ ಎಚ್.ವಿ ಹೇಳಿದ್ದಾರೆ. ಈ ಕ್ರಮ ರಸ್ತೆ ಶಿಸ್ತು, ಸುರಕ್ಷತೆ ಹಾಗೂ ಪರವಾನಗಿ ಪಡೆದವರ ನಡುವೆ ನ್ಯಾಯಸಮ್ಮತ ಸ್ಪರ್ಧೆ ಖಾತ್ರಿಪಡಿಸುವ ಉದ್ದೇಶದಿಂದ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ, ಮೋಟಾರ್ ವಾಹನ ಕಾಯ್ದೆ 1988ರ ಕಲಂ 116 ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮಗಳು 1989ರ ನಿಯಮ 221(ಎ)(2)ರನ್ವಯವಾಗಿ ಹೊಸ ವಲಯ ಗುರುತು ಫಲಕಗಳನ್ನು ಅಳವಡಿಸಲು ಸೂಚಿಸಲಾಗಿದೆ.

ಇದೇ ವೇಳೆ, ಪೊಲೀಸ್ ಉಪ ಆಯುಕ್ತರು (ಕ್ರೈಂ ಮತ್ತು ಟ್ರಾಫಿಕ್ ವಿಭಾಗ) ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಈ ಆದೇಶವನ್ನು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ದೇಶನ ನೀಡಲಾಗಿದೆ.

Star Of Kudla

Learn More →

Leave a Reply

Your email address will not be published. Required fields are marked *