
ಪುತ್ತೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ನಡೆಯಬೇಕಿದ್ದ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ದಿಬ್ಬಣದ ಟಿಟಿ ವಾಹನ ಬಿಸಿಲೆ ಘಾಟ್‌ನ ತಿರುವಿನಲ್ಲಿ ಪಲ್ಟಿಯಾಗಿ ಬಿದ್ದ ಪರಿಣಾಮ ಒಬ್ಬರು ಸಾವನ್ನಪ್ಪಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಘಟನೆ ಗುರುವಾರ ಬೆಳಿಗ್ಗೆ ಬಿಸಿಲೆ ಘಾಟ್‌ನ 22ನೇ ತಿರುವಿನಲ್ಲಿ ನಡೆದಿದೆ. ಸಕಲೇಶಪುರದ ಒಣಗೂರು ನಿವಾಸಿ ಶಿವರಾಜ್ (58) ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ.ಮದುವೆಗೂ ನಿನ್ನೆಯೇ ವಧು-ವರರು ಆದಿ ಸುಬ್ರಹ್ಮಣ್ಯ ಮಂಟಪಕ್ಕೆ ಆಗಮಿಸಿದ್ದರು. ಇಂದು ಬೆಳಿಗ್ಗೆ ವರಪಕ್ಷದವರು ಟಿಟಿ ವಾಹನದಲ್ಲಿ ಮದುವೆ ಸ್ಥಳದತ್ತ ತೆರಳುತ್ತಿದ್ದಾಗ, ವಾಹನ ನಿಯಂತ್ರಣ ತಪ್ಪಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಅಡಿ ಆಳಕ್ಕೆ ಪಲ್ಟಿಯಾಗಿ ಬಿದ್ದಿದೆ.ಅಪಘಾತದಲ್ಲಿ ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಪ್ರಾಥಮಿಕ ಚಿಕಿತ್ಸೆಗಾಗಿ ಕುಕ್ಕೆ ಸುಬ್ರಹ್ಮಣ್ಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ ಬಳಿಕ, 11 ಮಂದಿಯನ್ನು ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ಹಾಗೂ 7 ಮಂದಿಯನ್ನು ಮಂಗಳೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.ಘಟನೆಯ ನಿಖರ ಕಾರಣ ಇನ್ನೂ ತಿಳಿದುಬಾರದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


