ಪುತ್ತೂರು: ದ್ವೇಷ ಭಾಷಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಹಿರಿಯ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಪುತ್ತೂರು ಐದನೇ ಹೆಚ್ಚುವರಿ ಸೆಷನ್ಸ್ ಮತ್ತು ಜಿಲ್ಲಾ ನ್ಯಾಯಾಲಯದಿಂದ ಮತ್ತೆ ತಾತ್ಕಾಲಿಕ ರಿಲೀಫ್ ದೊರೆತಿದೆ.
ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲವಂತದ ಬಂಧನ ಮಾಡದಂತೆ ನೀಡಿದ್ದ ಮುಂಚಿನ ಆದೇಶವನ್ನು ಕಾಯ್ದಿರಿಸಿದ್ದು, ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನವೆಂಬರ್ 4ಕ್ಕೆ ಮುಂದೂಡಿದೆ.
ಈ ಮಧ್ಯೆ, ದೂರುದಾರೆಯ ಪರ ವಕೀಲರು ಹಾಗೂ ಪ್ರೋಸಿಕ್ಯೂಷನ್ ಪರವೂ ಹಾಜರಾಗಿ, ಪ್ರಭಾಕರ ಭಟ್ ಅವರಿಗೆ ಜಾಮೀನು ನೀಡಬಾರದು ಎಂದು ಆಕ್ಷೇಪಣೆ ಸಲ್ಲಿಸಿದರು.
ದಕ್ಷಿಣಕನ್ನಡ ಜಿಲ್ಲೆಯ ಉಪ್ಪಳಿಗೆ ಗ್ರಾಮದಲ್ಲಿ ಅಕ್ಟೋಬರ್ 20ರಂದು ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಅವಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದಲ್ಲದೆ, ಸಮಾಜದಲ್ಲಿ ಧಾರ್ಮಿಕ ಧ್ವೇಷ ಮೂಡಿಸುವ ಪ್ರಯತ್ನ ಮಾಡಿದ್ದಾರೆ ಎಂಬ ಆರೋಪದ ಮೇರೆಗೆ, ಸಿಪಿಐಎಂ ಮುಖಂಡೆ ಈಶ್ವರಿ ಪದ್ಮುಂಜ ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸರು ಈ ಪ್ರಕರಣವನ್ನು ಬಿಎನ್ಎಸ್ ಕಲಂ 79, 196, 290, 302 ಮತ್ತು 3(5) ಅಡಿಯಲ್ಲಿ ದಾಖಲಿಸಿಕೊಂಡಿದ್ದಾರೆ.
ಪ್ರಭಾಕರ ಭಟ್ ವಿರುದ್ಧ ಇತ್ತೀಚಿನ ವರ್ಷಗಳಲ್ಲಿ ಹಲವು ಬಾರಿ ಪ್ರಕರಣಗಳು ದಾಖಲಾಗಿದ್ದರೂ, ಪ್ರತಿಸಾರಿ ಅವರು ನ್ಯಾಯಾಲಯದ ಮೊರೆ ಹೋಗಿ ಬಂಧನದಿಂದ ತಪ್ಪಿಸಿಕೊಂಡಿದ್ದಾರೆ.
ಈ ಬಾರಿ ಸಿಪಿಐಎಂ ಮುಖಂಡೆಯೇ ದೂರು ದಾಖಲಿಸಿರುವುದರಿಂದ, ಇದು ದ್ವೇಷಪೂರಿತ ಮತ್ತು ರಾಜಕೀಯ ಪ್ರೇರಿತ ದೂರು ಎಂದು ಪ್ರಭಾಕರ ಭಟ್ ಪರ ವಕೀಲರು ನ್ಯಾಯಾಲಯದ ಮುಂದೆ ವಾದಿಸಿದರು.
ಈ ಹಿನ್ನೆಲೆಯಲ್ಲಿ ಅವರು ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು.
ಪುತ್ತೂರು ಗ್ರಾಮಾಂತರ ಪೋಲೀಸರು ಅವರಿಗೆ ಅಕ್ಟೋಬರ್ 30ರಂದು ಠಾಣೆಗೆ ಹಾಜರಾಗಿ ವಿಚಾರಣೆಗೆ ಸಹಕರಿಸಲು ನೋಟಿಸ್ ನೀಡಿದ್ದರು.
ನ್ಯಾಯಾಲಯವು ಪ್ರಭಾಕರ ಭಟ್ ಅರ್ಜಿಯನ್ನು ಪರಿಗಣಿಸಿ, ಪೊಲೀಸರಿಗೆ ಬಲವಂತದ ಬಂಧನ ಕೈಗೊಳ್ಳದಂತೆ ಸೂಚನೆ ನೀಡಿದ್ದು, ಪ್ರೋಸಿಕ್ಯೂಷನ್ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿತ್ತು.
ಇಂದು ನಡೆದ ವಿಚಾರಣೆಯ ವೇಳೆ, ಪ್ರೋಸಿಕ್ಯೂಷನ್ ಹಾಗೂ ದೂರುದಾರರ ಪರ ವಕೀಲರು ಜಾಮೀನು ನೀಡಬಾರದು ಎಂದು ವಾದಿಸಿದ ನಂತರ, ನ್ಯಾಯಾಲಯವು ವಿಚಾರಣೆಯನ್ನು ನವೆಂಬರ್ 4ಕ್ಕೆ ಮುಂದೂಡಿದೆ.


