
ಕಾರವಾರ: ಮಂಗಳೂರು ಮೂಲದ ಪರಿಸರ ಹೋರಾಟಗಾರ ನಾಗರಾಜ್ ಬಾಜಲ್ ಅವರು ‘ಸ್ವಚ್ಛ ಮಂಗಳೂರು’ ಎಂಬ ಪರಿಕಲ್ಪನೆಯ ಅಡಿಯಲ್ಲಿ ಅನೇಕ ವಿಶಿಷ್ಟ ಸ್ವಚ್ಛತಾ ಅಭಿಯಾನಗಳನ್ನು ಕೈಗೊಂಡು ಖ್ಯಾತರಾಗಿದ್ದಾರೆ. ಇದೀಗ ಅವರು ಮತ್ತೊಂದು ಪ್ರೇರಣಾದಾಯಕ ಪ್ರಯತ್ನವಾಗಿ ‘ಹಸಿರು ನಡೆ – ಪ್ರತೀ ಹೆಜ್ಜೆ ಸ್ವಚ್ಛತೆಯ ಕಡೆಗೆ’ ಎಂಬ ಹೆಸರಿನ 300 ಕಿ.ಮೀ ಸ್ವಚ್ಛತಾ ಜಾಗೃತಿ ನಡಿಗೆಗೆ ಚಾಲನೆ ನೀಡಿದ್ದಾರೆ.‘ಅಚಾತುರ್ಯದಿಂದ ಕಸದ ತ್ಯಜನೆ ಬೇಡ, ತ್ಯಾಜ್ಯವನ್ನು ಸರಿಯಾಗಿ ನಿರ್ವಹಿಸಿರಿ’ ಎಂಬ ಬೋರ್ಡ್ ಹಿಡಿದು ಅವರು ಕಾರವಾರದಿಂದ ಮಂಗಳೂರು ವರೆಗೆ ಈ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ. ಕರಾವಳಿ ಪ್ರದೇಶದ ಗ್ರಾಮಗಳು ಮತ್ತು ಪಟ್ಟಣಗಳಲ್ಲಿ ಜನರಿಗೆ ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸುವುದೇ ಅವರ ಉದ್ದೇಶ. ಜೊತೆಗೆ, ಸ್ಥಳೀಯ ಸಂಸ್ಥೆಗಳು ಮತ್ತು ನಾಗರಿಕರನ್ನು ತ್ಯಾಜ್ಯ ನಿರ್ವಹಣೆಯ ಪರಿಣಾಮಕಾರಿ ವಿಧಾನಗಳ ಬಗ್ಗೆ ಚರ್ಚೆಗೆ ಒಳಪಡಿಸುವುದು, ಯಶಸ್ವೀ ಸ್ಥಳೀಯ ಮಾದರಿಗಳನ್ನು ಗುರುತಿಸಿ ಇತರ ಕಡೆಗಳಲ್ಲಿ ಅನ್ವಯಿಸಲು ಉತ್ತೇಜಿಸುವುದೂ ಈ ಅಭಿಯಾನದ ಭಾಗವಾಗಿದೆ.‘ಹಸಿರು ನಡೆ’ ಅಭಿಯಾನಕ್ಕೆ ಅ.27 ರಂದು ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಉಪಾಯುಕ್ತೆ ಲಕ್ಷ್ಮೀ ಪ್ರಿಯಾ ಅವರು ಧ್ವಜ ಪ್ರದರ್ಶನದ ಮೂಲಕ ಚಾಲನೆ ನೀಡಿದರು. ನಂತರ ಸ್ವಚ್ಛ ಭಾರತ್ ಮಿಷನ್ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ನಾಗರಾಜ್, ಕಾರವಾರದಿಂದ ಪಾದಯಾತ್ರೆ ಆರಂಭಿಸಿ ಗೋಕರ್ಣ, ಕುಮಟಾ ಮಾರ್ಗವಾಗಿ ಮುಂದುವರಿದರು. ಅವರು ಹೋನ್ನಾವರ ಮತ್ತು ಉಡುಪಿ ಮಾರ್ಗವಾಗಿ ನವೆಂಬರ್ 3ರಂದು ಮಂಗಳೂರು ತಲುಪುವ ಯೋಜನೆ ಹೊಂದಿದ್ದಾರೆ.ಅಭಿಯಾನದ ಉದ್ದೇಶವನ್ನು ವಿವರಿಸುತ್ತಾ ನಾಗರಾಜ್ ಹೇಳಿದರು:“ಕರಾವಳಿ ಪ್ರದೇಶದಲ್ಲಿ ಸಮುದ್ರಕ್ಕೆ ಸೇರುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣ ದಿನೇದಿನೇ ಹೆಚ್ಚುತ್ತಿದೆ. ಇದಕ್ಕೆ ಕಾರಣ ಸರಿಯಾದ ಘನu ತ್ಯಾಜ್ಯ ನಿರ್ವಹಣೆಯ ಕೊರತೆ. ಈ ನಡಿಗೆಯ ಮೂಲಕ ಪಂಚಾಯತ್ಗಳು, ಶಾಲೆಗಳು, ಕಾಲೇಜುಗಳು, ಧಾರ್ಮಿಕ ಕೇಂದ್ರಗಳು, ಸಂಘಟನೆಗಳು ಮತ್ತು ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಪರಿಣಾಮಕಾರಿ ತ್ಯಾಜ್ಯ ನಿರ್ವಹಣಾ ಕ್ರಮಗಳನ್ನು ಹಂಚಿಕೊಳ್ಳುವ ಉದ್ದೇಶ ನನ್ನದು,” ಎಂದು ಅವರು ಹೇಳಿದರು.


