ರಾಜ್ಯದಲ್ಲಿ ಮಾದಕದ್ರವ್ಯ ನಿಗ್ರಹಿಸಲು ವಿಶೇಷ ಕಾರ್ಯಪಡೆಗೆ ಸಿಎಂ ಚಾಲನೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಅವರು ಮಾದಕದ್ರವ್ಯ ನಿಗ್ರಹ ವಿಶೇಷ ಕಾರ್ಯಪಡೆಗೆ ಚಾಲನೆ ನೀಡಿದರು.

 ರಾಜ್ಯದಲ್ಲಿ ಹೆಚ್ಚುತ್ತಿರುವ ಮಾದಕವಸ್ತುಗಳ ಹಾವಳಿಯನ್ನು ನಿಗ್ರಹಿಸಲು ರಚಿಸಲಾದ ಮಾದಕದ್ರವ್ಯ ವಿರೋಧಿ ಕಾರ್ಯಪಡೆಗೆ ಇಂದು ಚಾಲನೆ ನೀಡಲಾಯಿತು.

66 ಸಿಬ್ಬಂದಿಗಳ ಅನುಮೋದಿತ ಬಲದೊಂದಿಗೆ ಮಾದಕವಸ್ತು ನಿಗ್ರಹ ದಳವನ್ನು ರಚಿಸಿ ಆಗಸ್ಟ್‌ನಲ್ಲಿ ರಾಜ್ಯ ಸರ್ಕಾರ ಆದೇಶಿಸಿತ್ತು. ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಅವರು ನೂತನ ಕಾರ್ಯಪಡೆಗೆ ಚಾಲನೆ ನೀಡಿದರು.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಶ್ರೇಣಿಯ ಅಧಿಕಾರಿಯೊಬ್ಬರು ಈ ಘಟಕದ ಮುಖ್ಯಸ್ಥರಾಗಿರುತ್ತಾರೆ. ಮತ್ತು ಮಾದಕ ಪದಾರ್ಥಗಳ ಹಾವಳಿ ತಡೆಗಾಗಿ ದೈನಂದಿನ ಕಾರ್ಯಾಚರಣೆಗಳು, ಕ್ರಮಗಳ ಕುರಿತು ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಅವರಿಗೆ ನೇರವಾಗಿ ವರದಿ ಮಾಡಲಿದೆ ಎಂದು ಆಗಸ್ಟ್ 1ರಂದು ಹೊರಡಿಸಲಾದ ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ.

ಇದಕ್ಕಾಗಿ 10 ಹೊಸ ಹುದ್ದೆಗಳನ್ನು ರಚಿಸಲಾಗಿದೆ ಹಾಗೂ ನಕ್ಸಲ್ ನಿಗ್ರಹ‌ಪಡೆಯಲ್ಲಿದ್ದ 56 ಸಿಬ್ಬಂದಿಯನ್ನು ಸೇರ್ಪಡೆಗೊಳಿಸಿಕೊಳ್ಳಲಾಗಿದೆ. ಹೊಸದಾಗಿ ರಚಿಸಲಾದ ಹುದ್ದೆಗಳಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್‌ಗಳು ಇಬ್ಬರು ಉಪ ಪೊಲೀಸ್ ಸೂಪರಿಂಟೆಂಡೆಂಟ್‌ಗಳು ಓರ್ವ ಸಹಾಯಕ ಆಡಳಿತ ಅಧಿಕಾರಿ, ಓರ್ವ ಸೆಕ್ಷನ್ ಸೂಪರಿಂಟೆಂಡೆಂಟ್, ಓರ್ವ ಕಿರಿಯ ಸಹಾಯಕ, ಓರ್ವ ಪ್ರಥಮ ದರ್ಜೆ ಸಹಾಯಕ, ಓರ್ವ ಸ್ಟೆನೋಗ್ರಾಫರ್ ಮತ್ತು ದಳಾಯತ್ ಇರಲಿದ್ದಾರೆ. ನಕ್ಸಲ್ ನಿಗ್ರಹ ಪಡೆಯಿಂದ ಸೇರ್ಪಡೆಗೊಳಿಸಲಾಗುವ 56 ಸಿಬ್ಬಂದಿಯಲ್ಲಿ ಇಬ್ಬರು ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು ನಾಲ್ವರು ಪೊಲೀಸ್ ಸಬ್ – ಇನ್‌ಸ್ಪೆಕ್ಟರ್‌ಗಳು, 20 ಹೆಡ್ ಕಾನ್ಸ್​ಟೇಬಲ್​ಗಳು ಮತ್ತು 30 ಕಾನ್ಸ್​ಟೇಬಲ್​ಗಳು ಇರಲಿದ್ದಾರೆ.

ಕೇಂದ್ರ ತನಿಖಾ ಸಂಸ್ಥೆಯಾಗಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮಾದರಿಯಲ್ಲಿ ಕಾರ್ಯ ನಿರ್ವಹಿಸಿಸಲಿರುವ ರಾಜ್ಯ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ, ಬೆಂಗಳೂರು ಸೇರಿದಂತೆ ರಾಜ್ಯದ ಇತರ ನಗರಗಳು ಮಾತ್ರವಲ್ಲದೆ ಜಿಲ್ಲೆಗಳಲ್ಲಿನ ಸಂಘಟಿತ ಮಾದಕವಸ್ತು ಜಾಲಗಳನ್ನು ಪತ್ತೆ ಹಚ್ಚಲು ಕಾರ್ಯ ನಿರ್ವಹಿಸಲಿದೆ. ಹಾಗೂ ಕೇಂದ್ರ ತನಿಖಾ ಸಂಸ್ಥೆಗಳೊಂದಿಗೆ ಸಮನ್ವಯತೆ ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಕಳೆದ 2 ವರ್ಷಗಳಿಂದಲೂ ರಾಜ್ಯದಲ್ಲಿ 250 – 300 ಕೋಟಿ ರೂ. ಮೌಲ್ಯದ ಮಾದಕ ಪದಾರ್ಥಗಳನ್ನು ವಶಪಡಿಸಿಕೊಂಡು ನಾಶಪಡಿಸಲಾಗಿದೆ. ಅದಾಗ್ಯೂ ಸಹ ವಿವಿಧ ಮಾರ್ಗಗಳ ಮೂಲಕ ಮಾದಕ ವಸ್ತುಗಳು ರಾಜ್ಯವನ್ನು ತಲುಪುತ್ತಿವೆ. ಹೀಗಾಗಿ ಮುಖ್ಯಮಂತ್ರಿ ಸದನದಲ್ಲಿ ಘೋಷಿಸಿದಂತೆ ಕರ್ನಾಟಕ ರಾಜ್ಯವನ್ನು ಮಾದಕ ಪದಾರ್ಥಗಳಿಂದ ಮುಕ್ತವಾಗಿಸುವ ಉದ್ದೇಶದಿಂದ ಹೊಸ ಕಾರ್ಯಪಡೆಯನ್ನು ರಚಿಸಲಾಗಿದೆ. ಅಲ್ಲದೇ ಮಾದಕ ಪದಾರ್ಥಗಳ ಮಾರಾಟ ಅಥವಾ ವ್ಯಸನ ಹೊಂದಿರುವವರು ಪತ್ತೆಯಾದಾಗ ಅಂಥವರ ಮೇಲೆ ನಿಗಾವಹಿಸಲು ಓರ್ವ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವುದರ ಕುರಿತು ಡಿಜಿ & ಐಜಿಪಿ ಎಂ.ಎ.ಸಲೀಂ ಅವರು ಸಲಹೆ ನೀಡಿದ್ದರು. ‘ಸನ್ಮಿತ್ರ’ ಹೆಸರಿನಲ್ಲಿ ಆ ಕಾರ್ಯಕ್ರಮವನ್ನೂ ಜಾರಿಗೆ ತರಲಾಗಿದೆ ಎಂದು ಗೃಹ ಸಚಿವ ಡಾ ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರೊಂದರಲ್ಲೇ ಪ್ರಸಕ್ತ ವರ್ಷ ಬರೋಬ್ಬರಿ 81.21 ಕೋಟಿ ರೂಪಾಯಿ ಮೌಲ್ಯದ ವಿವಿಧ ಮಾದಕ‌ ಪದಾರ್ಥಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 2025ರ ಅಕ್ಟೋಬರ್ 8 ರವರೆಗಿನ ಅಂಕಿ – ಅಂಶಗಳನ್ವಯ ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದವರ ವಿರುದ್ಧ ಒಟ್ಟ 711 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, 1,013 ಭಾರತೀಯ ಹಾಗೂ 35 ವಿದೇಶಿ ಮೂಲದ ಆರೋಪಿಗಳ ಸಹಿತ 1,048 ಜನರನ್ನು ಬಂಧಿಸಲಾಗಿದೆ. ಅವರುಗಳಿಂದ ಒಟ್ಟು 1483.30 ಕೆ.ಜಿ ತೂಕದ ಮಾದಕ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿತ್ತು.

News Editor

Learn More →

Leave a Reply

Your email address will not be published. Required fields are marked *