ನಾಟಿವೈದ್ಯ ಪದ್ದತಿಗೆ ಜಗತ್ತಿನಲ್ಲೇ ಒಲವು-ಮಾಜಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಸಮಾಜದ ಆರೋಗ್ಯ ರಕ್ಷಣೆಯಾಗಬೇಕಾದರೆ ಮೊದಲು ನಮ್ಮ ಆರೋಗ್ಯ ರಕ್ಷಣೆ ಅಗತ್ಯ. ಈ ನಿಟ್ಟಿನಲ್ಲಿ ಹೆಚ್ಚು ಅಡ್ಡ ಪರಿಣಾಮ ಬೀರದ ಪಾರಂಪರಿಕ ವೈದ್ಯವಿಜ್ಞಾನದತ್ತ ಹೆಚ್ಚಿನ ಆಸಕ್ತಿ ಜನತೆಯಲ್ಲಿ ಬೆಳೆಯುತ್ತಿದೆ. ಭಾರತದ ಹಳ್ಳಿಯ ಮೂಲೆ ಮೂಲೆಗಳಲ್ಲಿಯೂ ನಾಟಿವೈದ್ಯ ಪದ್ದತಿ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಇದೀಗ ಈ ಪಾರಂಪರಿಕ ವೈದ್ಯ ವಿಜ್ಞಾನ ಜಗತ್ತಿನಲ್ಲಿ ತನ್ನದೇ ಆದ ವರ್ಚಸ್ಸು ಪಡೆದುಕೊಂಡಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಅಭಿಪ್ರಾಯಪಟ್ಟರು.

ಭಾನುವಾರ ಮುಂಡೂರು ಪಂಜಳದಲ್ಲಿ ಸಾಲ್ಮರ ಆಯುರ್ವೇದದ ವತಿಯಿಂದ ಒಂದು ದಿನದ ಮೂಲವ್ಯಾದಿ ಉಚಿತ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾನ್ಯವಾಗಿ ನಾವು ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸುವುದಿಲ್ಲ. ಆದರೆ ಅನಾರೋಗ್ಯ ಪ್ರಾರಂಭವಾದಾಗ ವೈದ್ಯರಲ್ಲಿಗೆ ಓಡುತ್ತೇವೆ. ಅದರ ಔಷಧಿ ತಿಂದು ಮತ್ತೆ ಕೆಲ ರೋಗಗಳೂ ನಮ್ಮನ್ನು ಭಾದಿಸಲು ಆರಂಭವಾಗುತ್ತದೆ. ತಮ್ಮ ಪಕ್ಕದಲ್ಲಿಯೇ ಇರುವ ಆಯುರ್ವೇದ ಔಷಧಗಳತ್ತ ಒಲವು ತೋರಿಸುವುದಿಲ್ಲ. ಆದರೆ ಕೇಂದ್ರ ಸರ್ಕಾರವೇ ಈ ಆಯುರ್ವೇದದ ಆಯುಷ್ ವ್ಯವಸ್ಥೆ ಮಾಡಿದೆ. ನಾವು ದೂರ ಮಾಡಿರುವ ಆಯುರ್ವೇದ ಔಷಧ ಈಗ ಜಗತ್ತಿನ ಎಲ್ಲಾ ರಾಷ್ಟ್ರಗಳ ಮನಸ್ಸುಗಳನ್ನು ಸೆಳೆಯುತ್ತಿದೆ. ಪುತ್ತೂರಿನ ಸಾಲ್ಮರ ಆಯುರ್ವೇದ ಮೂಲವ್ಯಾದಿಗೆ ಅತ್ಯುತ್ತಮ ಔಷಧಿಯಾಗಿದ್ದು, ಜನರನ್ನು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮೂಲಕ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ಕುಮಾರ್ ರೈ ಅವರು ಮಾತನಾಡಿ, ಸಾವಿರಾರು ವರ್ಷಗಳಿಂದ ಜನಪದ ರೀತಿಯಲ್ಲಿಯೇ ಬೆಳೆದುಬಂದ ಆಯುರ್ವೇದ ಈಗ ವಿಜ್ಞಾನವಾಗಿ ಬದಲಾಗಿದೆ. ಗಿಡಮೂಲಿಕೆಗಳ ಆಧಾರಿತವಾಗಿರುವ ಪುತ್ತೂರಿನ ಸಾಲ್ಮರ ಆಯುರ್ವೇದ ಮೂಲವ್ಯಾದಿಗೆ ಅತ್ಯಂತ ಪರಿಣಾಮಕಾರಿ ಔಷಧಿಯಾಗಿದೆ ಎಂದರು.

ಪಾರಂಪರಿಕ ವೈದ್ಯ ಸಂಶುದ್ದೀನ್ ಸಾಲ್ಮರ ಅವರು ಮಾತನಾಡಿ, ನಾಟಿವೈದ್ಯ ಪದ್ದತಿಯಿಂದ ಆರಂಭವಾದ ಈ ಪದ್ಧತಿ ಇಂದು ಹೆಚ್ಚು ಹೊಸತನಗಳ ಆವಿಷ್ಕಾರದ ಮೂಲಕ ಹೆಚ್ಚು ಜನಪ್ರೀಯಗೊಂಡಿದೆ. ವಿವಿಧ ಜಿಲ್ಲೆಗಳಿಂದ ಕ್ಲಿನಿಕ್ ಗಳನ್ನು ತಮ್ಮಲ್ಲಿ ತೆರೆಯುವಂತೆ ಬೇಡಿಕೆ ಬರುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಮಾಡುತ್ತೇವೆ. ಸಮರ್ಪಕ ರೀತಿಯಲ್ಲಿ ವೈದ್ಯರು ಹೇಳುವಂತೆ ಮಾಡಿದರೆ ಸಾಲ್ಮರ ಆಯುರ್ವೇದ ಮೂಲವ್ಯಾದಿಯನ್ನು ಬೇರು ಸಮೇತ ಕಿತ್ತು ಹಾಕುತ್ತದೆ. ಸಮಯ ಮತ್ತು ಶ್ರಮ ಜನ ನೀಡಬೇಕು ಎಂದರು.

ವೇದಿಕೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್, ಬದಿಯಡ್ಕ ಗ್ರಾಪಂ ಉಪಾಧ್ಯಕ್ಷ ಅಬ್ಬಾಸ್,ಸಾಲ್ಮರ ಆಯುರ್ವೇದದ ಆಡಳಿತ ಪಾಲುದಾರರಾಗಿರುವ ನೌಫಲ್ ಸಿ.ಎ, ಡಾ.ರುಕ್ಸಾನಾ, ಅಶ್ರಫ್ ಪಟ್ಟೆ, ಡಾ.ಅಖಿಲಾ ಭಟ್, ಪಾಲುದಾರ ನಿಸಾರ್ ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *