ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಗಾಂಧೀಕಟ್ಟೆ ಸಮಿತಿ ವತಿಯಿಂದ ಪುತ್ತೂರು ಬಸ್‍ ನಿಲ್ದಾಣದ ಬಳಿಯ ಗಾಂಧೀಕಟ್ಟೆಯಲ್ಲಿ ಗಾಂಧೀ ಜನ್ಮದಿನಾಚರಣೆ

ಪುತ್ತೂರು :ಸ್ವಾತಂತ್ರ್ಯಕ್ಕೆ ಹೋರಾಡಿದ ಮಹಾನ್ ವ್ಯಕ್ತಿಗಳು ನಮಗೆ ದೇಶವನ್ನೇ ಆಸ್ತಿಯನ್ನಾಗಿ ಮಾಡಿಕೊಟ್ಟಿದ್ದಾರೆ. ಅಂತಹ ವ್ಯಕ್ತಿಗಳಲ್ಲಿ ಮಹಾತ್ಮ ಗಾಂಧಿ ಮುಂಚೂಣಿಯಲ್ಲಿದ್ದಾರೆ. ಗಾಂಧಿ ಅವರ ಬದುಕಿನ ತತ್ವಗಳು ಜನಸಾಮಾನ್ಯರ ಬದುಕಿಗೆ ಪ್ರೇರಣೆಯಾಗಿದೆ. ಎಂದು ಶಾಸಕ ಅಶೋಕ್ ರೈ ಅಭಿಪ್ರಾಯಪಟ್ಟರು.
ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಗಾಂಧೀಕಟ್ಟೆ ಸಮಿತಿ ವತಿಯಿಂದ ಪುತ್ತೂರು ಬಸ್‍ನಿಲ್ದಾಣದ ಬಳಿಯ ಗಾಂಧೀಕಟ್ಟೆಯಲ್ಲಿ ನಡೆದ ಗಾಂಧೀ ಜನ್ಮದಿನಾಚರಣೆಯ ಅಧ್ಯಕ್ಷತೆ ವಹಿಸಿ ಗಾಂಧೀ ಪುತ್ಥಳಿಗೆ ಹಾರಾರ್ಪಣೆ ಮಾಡಿ ಅವರು ಮಾತನಾಡಿದರು.

ಬದುಕಿನಲ್ಲಿ ಎಷ್ಟೇ ಸವಾಲುಗಳು ಬಂದರೂ ಮಹಾತ್ಮಾಗಾಂಧಿ ತಮ್ಮ ಅಹಿಂಸಾ ತತ್ವವನ್ನು ಬಿಟ್ಟುಕೊಡಲಿಲ್ಲ. ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಗಾಂಧೀಜಿ ಅವರಿಗೆ ನಾವು ಗೌರವ ಕೊಡಬೇಕು. ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡುವ ಕೆಲಸ ನಮ್ಮಿಂದಾಗಬೇಕು ಎಂದ ಅವರು ಅಮೇರಿಕಾ ದೇಶ ಆರ್ಥಿಕತೆಯಲ್ಲಿ ಸುಭದ್ರವಾಗಿದೆ. ನಾವು ಹಿಂದೆ ಇದ್ದೇವೆ ಎಂಬುವುದು ಹಲವರ ಅಭಿಪ್ರಾಯ. ಆದರೆ ಅಮೇರಿಕಾ ಸ್ವಾತಂತ್ರ್ಯ ಪಡೆದುಕೊಂಡು 240 ವರ್ಷಗಳಾಗಿವೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ಕೇವಲ 79 ವರ್ಷಗಳಷ್ಟೇ ಆಗಿದೆ. ಹಾಗಿದ್ದರೂ ನಮ್ಮ ಆರ್ಥಿಕತೆಯ ಹಾಗೂ ಅಭಿವೃದ್ಧಿಯ ವೇಗ ಅತ್ಯಂತ ಸುಸ್ಥಿತಿಯಲ್ಲಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಭಾರತ ವಿಶ್ವಗುರು ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ದೀಪಪ್ರಜ್ವಲನೆ ಮಾಡಿದ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರು ಮಾತನಾಡಿ, ಶಾಂತಿ ಸೌಹಾರ್ಧತೆಯ ಪ್ರತೀಕವಾಗಿರುವ ಮಹಾತ್ಮಾ ಗಾಂಧೀಜಿಯವರಂತೆ ಅಹಿಂಸಾ ತತ್ವವನ್ನು ಪಾಲನೆ ಮಾಡಬೇಕಾದರೆ ಧೈರ್ಯ ಬೇಕು. ಎಂತಹುದೇ ಸಂದರ್ಭದಲ್ಲಿಯೂ ಅವರು ಹಿಂಸೆಯತ್ತ ಮನ ಮಾಡಿಲ್ಲ. ಆ ಕಾರಣಕ್ಕಾಗಿಯೇ ಅವರು ಮಹಾತ್ಮರಾದರು.
ಗಾಂಧೀ ಅವರ ಕನಸಿನ ಭಾರತದ ಸೃಷ್ಟಿಗೆ ಅವರ ಜೀವನತತ್ವಗಳನ್ನು ನಾವು ಪಾಲನೆ ಮಾಡಬೇಕು ಎಂದರು.

ವೇದಿಕೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಶೀಲ್ದಾರ್ ನಾಗರಾಜ್ ವಿ, ಗಾಂಧೀಕಟ್ಟೆ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ,ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್, ಇನ್ಸ್‍ಪೆಕ್ಟರ್ ಜಾನ್ಸನ್ ಡಿಸೋಜ, ಕಸಪಾ ಪುತ್ತೂರು ಅಧ್ಯಕ್ಷ ಉಮೇಶ್ ನಾಯಕ್, ತಾಪಂ ವ್ಯವಸ್ಥಾಪಕ ಜಯಪ್ರಕಾಶ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಪುಡಾ ಸದಸ್ಯ ಲ್ಯಾನ್ಸಿ ಮಸ್ಕರೇನಸ್, ಹಿರಿಯ ಗಾಂಧಿವಾದಿ ಬೋಳೋಡಿ ಚಂದ್ರಹಾಸ ರೈ, ಗಾಂಧಿಕಟ್ಟೆ ಸಮಿತಿ ಪ್ರಧಾನ ಕಾರ್ಯದರ್ಶಿ ಸೈಯದ್ ಕಮಲ್ ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *