
ಬೆಂಗಳೂರು : ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರಿನ ಮಾನ್ವಿ ತಾಲೂಕಿಗೆ ಗಡಿಪಾರು ಆದೇಶ ಹೊರಡಿಸಿದ್ದಕ್ಕೆ ಹೈಕೋರ್ಟ್ ಒಂದು ವರ್ಷದ ಅವಧಿಗೆ ತಡೆ ನೀಡಿದೆ. ತಿಮರೋಡಿ ಹೈಕೋರ್ಟ್ ಮೆಟ್ಟಿಲೇರಿದ್ದು, ತಾತ್ಕಾಲಿಕ ಗೆಲುವು ಸಾಧಿಸಿದ್ದಾರೆ.ಈ ಮಧ್ಯಂತರ ತಡೆಯಿಂದಾಗಿ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಗಡಿಪಾರು ಆದೇಶದಿಂದ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. ಮುಂದಿನ ವಿಚಾರಣೆ ಅಕ್ಟೋಬರ್ 8 ರಂದು ನಡೆಯಲಿದೆ.
ಅಕ್ಟೋಬರ್ 8 ರವರೆಗೆ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಪುತ್ತೂರು ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಅವರು ಗಡಿಪಾರು ಆದೇಶ ಹೊರಡಿಸಿದ್ದರು. ಆದೇಶದ ನಂತರ, ತಿಮರೋಡಿ ತಮ್ಮ ಫೋನ್ ಸ್ವಿಚ್ ಆಫ್ ಮಾಡುವ ಮೂಲಕ ನಾಪತ್ತೆಯಾಗಿದ್ದರು. ಹೈಕೋರ್ಟ್ ತೀರ್ಪು ಈಗ ಅವರ ಪರವಾಗಿ ಬಂದಿರುವುದರಿಂದ, ಅವರು ಸದ್ಯಕ್ಕೆ ಒಂದು ಅಡಚಣೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಏತನ್ಮಧ್ಯೆ, ತಿಮರೋಡಿ ಅವರ ನಿವಾಸದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಅವರಿಗೆ ಮೂರು ನೋಟಿಸ್ಗಳನ್ನು ನೀಡಲಾಗಿದೆ. ಆದರೆ, ಅವರು ಮೂರು ಬಾರಿಯೂ ವಿಚಾರಣೆಗೆ ಹಾಜರಾಗಲಿಲ್ಲ. ಅವರು ಈಗ ಮಂಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
