
ಪುತ್ತೂರು:ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಬಳಿ ಇರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಡೆಯುತ್ತಿರುವ 91ನೇ ವರ್ಷದ ಶಾರದೋತ್ಸವ ಸೆ.22ರಂದು ನವರಾತ್ರಿ ಪೂಜೆಯಿಂದ ಆರಂಭಗೊಂಡಿದೆ. ಸೆ.29ಕ್ಕೆ ಶ್ರೀ ಶಾರದೆಯ ವಿಗ್ರಹ ಪ್ರತಿಷ್ಠೆ, ಸೆ.30ಕ್ಕೆ ಸಾಮೂಹಿಕ ಚಂಡಿಕಾ ಹೋಮ ನಡೆಯಲಿದ್ದು, ಅ.2ಕ್ಕೆ ಸಂಜೆ ವೈಭವದ ಶೋಭಾಯಾತ್ರೆಯು ಬೊಳುವಾರಿನಿಂದ ದರ್ಬೆಯ ತನಕ ನಡೆಯಲಿದೆ. ಶ್ರೀ ಶಾರದೆಯ ಪ್ರತಿಷ್ಠೆ ದಿನದಿಂದಲೇ ಪುತ್ತೂರು ಪೇಟೆ ಮೈಸೂರು ದಸರಾ ಮಾದರಿಯಲ್ಲಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲಿದೆ ಎಂದು ಶ್ರೀ ಶಾರದಾ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ನವರಾತ್ರಿಯ ಸಂದರ್ಭ ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಭಜನೆ ಮತ್ತು ಮಹಾಪೂಜೆ ನಡೆಯುತ್ತಿದೆ.ಸೆ.29ಕ್ಕೆ ಶ್ರೀ ಶಾರದಾ ವಿಗ್ರಹ ಪ್ರತಿಷ್ಠೆ ನಡೆಯಲಿದೆ.ಈಗಾಗಲೇ ಸಿದ್ಧತೆ ನಡೆಸಿರುವಂತೆ ಪುತ್ತೂರು ಪೇಟೆಯಾದ್ಯಂತ ಮೈಸೂರು ದಸರಾ ಶೈಲಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದ್ದು, ಶ್ರೀ ಶಾರದೆಯ ಪ್ರತಿಷ್ಠೆಯ ದಿನದಿಂದ ಅದು ಬೆಳಗಲಿದೆ. ಅದೇ ದಿನದಿಂದ ಸಂಜೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಶಾಸಕ ಅಶೋಕ್ ಕುಮಾರ್ ರೈ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಒಟ್ಟು ಕಾರ್ಯಕ್ರಮಕ್ಕೆ ಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದವರು ಹೇಳಿದರು.
ಶ್ರೀ ಶಾರದೆಯ ಶೋಭಾಯಾತ್ರೆಯಲ್ಲಿ ಹಲವು ಹೊಸತನ ತರುವ ನಿಟ್ಟಿನಲ್ಲಿ ಹೊರ ರಾಜ್ಯದ 14 ಕಲಾತಂಡಗಳು ಶೋಭಾಯಾತ್ರೆಯಲ್ಲಿ ತಮ್ಮ ಕಲಾ ಪ್ರದರ್ಶನ ನೀಡಲಿವೆ. ಶೋಭಾಯಾತ್ರೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಪುಷ್ಪಾರ್ಚನೆ ಮಾಡಲಿದ್ದಾರೆ.ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ಚಾಲನೆ ನೀಡಲಿದ್ದಾರೆ. ಅತ್ಯಂತ ಶಿಸ್ತು ಬದ್ಧವಾಗಿ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯ ಆರಂಭದಲ್ಲಿ ಕುಣಿತ ಭಜನೆ ಇರುತ್ತದೆ. ಅದರ ಹಿಂದೆ 14 ಕಲಾ ತಂಡಗಳು ತಮ್ಮ ಪ್ರದರ್ಶನ ನೀಡಲಿವೆ ಎಂದು ಸೀತಾರಾಮ ರೈ ಕೆದಂಬಾಡಿಗುತ್ತು ಹೇಳಿದರು.
ಶೋಭಾಯಾತ್ರೆಯಲ್ಲಿ ಹುಲಿ ವೇಷಕ್ಕೆ ಅವಕಾಶವಿದೆ.ಶಿಸ್ತು ಬದ್ಧವಾಗಿ ಸೇವಾ ರೂಪದಲ್ಲಿ ಹುಲಿವೇಷದವರು ಭಾಗವಹಿಸಬಹುದು. ಶ್ರೀ ಶಾರದೆಯ ಜಲಸ್ತಂಭನದ ಸಂದರ್ಭದಲ್ಲಿ ಶ್ರೀ ಶಾರದೆಯ ಜಲಸಂಪ್ರೋಕ್ಷಣೆಗಾಗಿ ಹುಲಿವೇಷ ಹಾಕಿದವರು ಭಾಗವಹಿಸುತ್ತಾರೆ. ಆದರೆ ಶೋಭಾಯಾತ್ರೆಯಲ್ಲಿ ಕಾಣುವುದು ಬಹಳ ಕಡಿಮೆ.ಅವರು ಶೋಭಾಯಾತ್ರೆಯಲ್ಲೂ ಪಾಲ್ಗೊಳ್ಳಬೇಕೆಂದು ಭಕ್ತರ ಆಶಯವೂ ಇದೆ.ಈ ನಿಟ್ಟಿನಲ್ಲಿ ಶಿಸ್ತು ಬದ್ಧವಾಗಿ ಭಾಗವಹಿಸಲು ಅವರಿಗೂ ಅವಕಾಶವಿದೆ ಎಂದು ಸೀತಾರಾಮ ರೈ ಕೆದಂಬಾಡಿಗುತ್ತು ಅವರು ಹೇಳಿದರು.
ನವರಾತ್ರಿ ಉತ್ಸವದಲ್ಲಿ ಸೆ.30ರಂದು ಬೆಳಿಗ್ಗೆ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಚಂಡಿಕಾ ಯಾಗವು ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ. ಮಧ್ಯಾಹ್ನ ಗಂಟೆ 12ಕ್ಕೆ ಪೂರ್ಣಾಹುತಿ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.ಸಾಮೂಹಿಕ ಚಂಡಿಕಾ ಹೋಮ ಸೇವೆ ಮಾಡಿಸುವ ಭಕ್ತರು ಸೇವಾ ರಶೀದಿಯನ್ನು ಮಾಡುವಂತೆ ವಿನಂತಿದರು.
ಅ.2ಕ್ಕೆ ಶ್ರೀ ಶಾರದೆಯ ಭವ್ಯ ಶೋಭಾಯಾತ್ರೆ ಬೊಳುವಾರಿನಿಂದ ಆರಂಭಗೊಳ್ಳಲಿದೆ.ಸಂಜೆ ಗಂಟೆ 3ರಿಂದ ಮಿಥುನ್‌ರಾಜ್ ಅವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.ಸಂಜೆ ಗಂಟೆ 4.55ಕ್ಕೆ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಶೋಭಾಯಾತ್ರೆಯ ಆರಂಭದಲ್ಲಿ ಭಗವಧ್ವಜವಿರುವ ವಾಹನ, ಅದರ ಹಿಂದೆ 300 ಮಂದಿಯ ನೃತ್ಯ ಭಜನೆ ತಂಡ, ಅದರ ಹಿಂದೆ 14 ಕಲಾತಂಡಗಳು ಇರಲಿವೆ. ಸಹಸ್ರಬೆಳಕು ಕಲಾತಂಡ, ದೇವಂ ನೃತ್ಯ ಕಲಾ ತಂಡ, ವೀಳಕಟ್ಟಾಂ, ಫ್ಲವರ್ ಡ್ಯಾನ್ಸ್,ಸಿಂಗಾರಿ ಕಾಪಾಡಿ ಕಲಾತಂಡ, ಶ್ರೀ ದೇವಿಯ ಭವ್ಯ ಫಲಕದ ರಥ, ಕರಿಂಕಾಳಿ ತಂಡ,ಕಥಕ್ಕಳಿ ತಂಡ, ಪೂಕಾವಡಿ ತಂಡ, ಆಂಧ್ರದ ಕಲಾತಂಡದ ಕೊಟ್ಟಾಯಂನ ಗರುಡ ಯಾನ, ಚೆಂಡೆ ಮೇಳ, ಸಿಂಗಾರಿ ಮೇಳ ಕೊನೆಗ ಶಾರದೆಯ ವಿಗ್ರಹ ಇರಲಿದೆ.ಶಿಸ್ತು ಬದ್ಧವಾಗಿ ಶೋಭಾಯಾತ್ರೆ ನಡೆಯಲಿದೆ.ಸ್ವಯಂ ಸೇವಕರು ಎಲ್ಲಾ ವ್ಯವಸ್ಥೆಯನ್ನು ಜೋಡಣೆ ಮಾಡಲಿದ್ದಾರೆ ಎಂದು ಶ್ರೀ ಶಾರದಾ ಭಜನಾ ಮಂದಿರದ ಕೋಶಾಧಿಕಾರಿ ನವೀನ್ ಕುಲಾಲ್ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಶ್ರೀ ಶಾರದಾ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಖಜಾಂಜಿ ನವೀನ್ ಕುಲಾಲ್, ಉತ್ಸವ ಸಮಿತಿ ವ್ಯವಸ್ಥಾಪಕ ಡಾ. ಸುರೇಶ್ ಪುತ್ತೂರಾಯ, ಸಂಯೋಜಕ ಕೃಷ್ಣ ಎಂ ಅಳಿಕೆ ಉಪಸ್ಥಿತರಿದ್ದರು.
