
ಉಳ್ಳಾಲ: ಉಳ್ಳಾಲ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ, ತಾಲೂಕಿನ ಜನಸಾಮಾನ್ಯರ 28 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಸಿಪಿಐಎಂ ಉಳ್ಳಾಲ ಮತ್ತು ಮುಡಿಪು ವಲಯ ಸಮಿತಿಗಳ ಜಂಟಿ ನೇತೃತ್ವದಲ್ಲಿ ದೇರಳಕಟ್ಟೆ ಮೈದಾನದಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ ನಡೆಯಿತು. ಸಮಾವೇಶಕ್ಕೂ ಮುನ್ನ ನಿಟ್ಟೆ ಮೆಡಿಕಲ್ ಕಾಲೇಜು ಹಾಗೂ ನಾಟೆಕಲ್ ಜಂಕ್ಷನ್‌ನಿಂದ ಸಿಪಿಐಎಂ ಕಾರ್ಯಕರ್ತರು ದೇರಳಕಟ್ಟೆ ಮೈದಾನದವರೆಗೆ ಮೆರವಣಿಗೆಯಲ್ಲಿ ಆಗಮಿಸಿದರು.ಸಮಾವೇಶವನ್ನು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಉದ್ಘಾಟಿಸಿ ಮಾತನಾಡಿ, ಉಳ್ಳಾಲ ತಾಲೂಕಿನಲ್ಲಿ ರಿಯಲ್ ಎಸ್ಟೇಟ್, ಶಿಕ್ಷಣ, ಆರೋಗ್ಯ ಕ್ಷೇತ್ರದ ಲಾಬಿಗಳ ದರ್ಬಾರ್ ನಡೆಯುತ್ತಿದೆ. ಉಳ್ಳಾಲದ ಅಭಿವೃದ್ದಿಗೆ ಸಂಬಂಧಿಸಿ ಶಾಸಕ ಯು.ಟಿ. ಖಾದರ್ ಕ್ಷೇತ್ರದಲ್ಲಿರುವ ಮೆಡಿಕಲ್ ಕಾಲೇಜು, ಶಿಕ್ಷಣ ಸಂಸ್ಥೆಗಳ, ವಿವಿಧ ಉದ್ಯಮಗಳ ಮಾಲಕರ ಜೊತೆ ಚರ್ಚಿಸುತ್ತಾರೆ. ಇಂತಹ ಸಭೆಗಳು ಬಂಡವಾಳಶಾಹಿಗಳ ಹಿತಾಸಕ್ತಿಗಳನ್ನು ಕಾಪಾಡುವ ನೀತಿಗಳಿಗೆ ಕಾರಣವಾಗುತ್ತಿದೆ. ತಾಲೂಕಿನ ಮೀನುಗಾರರು, ದಲಿತರು, ಆದಿವಾಸಿಗಳು, ಕೂಲಿಕಾರರು, ಸಾರಿಗೆ ಕಾರ್ಮಿಕರು, ವಿವಿಧ ಸಂಸ್ಥೆಗಳಲ್ಲಿ ದುಡಿಯುವ ಸ್ಥಳೀಯ ಶ್ರಮಜೀವಿಗಳನ್ನು ಕೇಳುವವರು ಇಲ್ಲದಂತಾಗಿದೆ.ತಾಲೂಕು ವ್ಯಾಪ್ತಿಯಲ್ಲಿ ಸ್ಥಳೀಯರಿಗೆ ಇಲ್ಲಿರುವ ಖಾಸಗಿ ಒಡೆತನದ ದುಬಾರಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ದೊರಕುವುದಿಲ್ಲ.


ಸರಕಾರಿ ಕಾಲೇಜುಗಳನ್ನು ಸ್ಥಾಪಿಸಲು ಈ ಲಾಭಿಗಳು ಬಿಡುತ್ತಿಲ್ಲ. ಕೆಂಪು ಮಣ್ಣು ಮಾಫಿಯಾಗಳು ತಾಲೂಕಿನ ಗ್ರಾಮೀಣ ಭಾಗದಲ್ಲಿ ಖನಿಜಯುಕ್ತ ಮಣ್ಣಿನ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದೆ,ಅಕ್ಷರಶಃ ಅಮೂಲ್ಯ ಕೆಂಪು ಮಣ್ಣನ್ನು ದೋಚಲಾಗುತ್ತಿದೆ. ಮರಳು ಮಾಫಿಯಾಗಳು ನೇತ್ರಾವತಿ ನದಿ ನಡುವಿನ ಕುದ್ರುಗಳನ್ನು ಬಲಿ ಪಡೆಯುತ್ತಿವೆ. ಶಾಸಕ ಯುಟಿ ಖಾದರ್ ಅವರು ಖಾಸಗಿ ಮೆಡಿಕಲ್, ಆರೋಗ್ಯ, ಶಿಕ್ಷಣ ಕ್ಷೇತ್ರದ ಅಭಿವೃದ್ದಿಯನ್ನು ತೋರಿಸಿ ತಾಲೂಕಿನ ಅಭಿವೃದ್ಧಿ ಎಂದು ಬಿಂಬಿಸುತ್ತಿದ್ದಾರೆ. ವಿರೋಧ ಪಕ್ಷ ಬಿಜೆಪಿ ಮತೀಯ ಪ್ರಶ್ನೆಗಳಿಗೆ ಮಾತ್ರ ಬೀದಿಗಿಳಿಯುತ್ತದೆ, ವಿಭಜನೆಯ ರಾಜಕಾರಣವನ್ನು ಮಾಡುತ್ತದೆ.ಇದು ಕ್ಷೇತ್ರದ ಜನಸಾಮಾನ್ಯರನ್ನು ಅಸಹಾಯಕತೆಗೆ ತಳ್ಳಿದೆ. ಶಾಸಕ ಖಾದರ್ ಅವರು ವಸತಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ, ಉದ್ಯೋಗ ಸೃಷ್ಟಿಯಂತಹ ಶ್ರಮಜೀವಿಗಳ ಬೇಡಿಕೆಗಳ ಕುರಿತು ಇನ್ನಾದರೂ ಗಮನ ಹರಿಸಬೇಕು, ಮಾಫಿಯಾಗಳಿಗೆ ಕಡಿವಾಣ ಹಾಕಬೇಕು. ಜನಸಾಮಾನ್ಯರನ್ನು ಒಳಗೊಂಡ ಸಮಗ್ರ ಅಭಿವೃದ್ದಿಗೆ ಮುಂದಾಗದಿದ್ದಲ್ಲಿ ಸಿಪಿಐಎಂ ಪಕ್ಷ ಹೋರಾಟವನ್ನು ಗ್ರಾಮಗಳಿಗೆ ಕೊಂಡೊಯ್ಯಲಿದೆ ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತಾಡಿದ ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು, ತಾಲೂಕಿನ ಜನಸಾಮಾನ್ಯರ 28 ಬೇಡಿಕೆಗಳನ್ನು ಮುಂದಿಟ್ಟು ಹಕ್ಕೊತ್ತಾಯ ಸಮಾವೇಶ ಹಮ್ಮಿಕೊಂಡಿದ್ದೇವೆ. ಪ್ರತಿಯೊಂದು ಬೇಡಿಕೆಗಳನ್ನು ಅಧ್ಯಯನ ನಡೆಸಿ ಮುಂದಿಟ್ಟಿದ್ದೇವೆ. ಕಾಮ್ರೇಡ್ ಕೃಷ್ಣ ಶೆಟ್ಟಿ, ರಾಮಚಂದ್ರ ರಾವ್ ಶಾಸಕರಾದ ಅವಧಿ ಹೊರತಾಗಿ ಜನಸಾಮಾನ್ಯರ ಬೇಡಿಕೆಗಳಿಗೆ ಬಂಡವಾಳಶಾಹಿ ಪಕ್ಷಗಳ ಶಾಸಕರುಗಳ ಅವಧಿಯಲ್ಲಿ ಮನ್ನಣೆ ದೊರಕಿಲ್ಲ. ಹಕ್ಕೊತ್ತಾಯ ಸಮಾವೇಶದಲ್ಲಿ ಮಂಡಿಸಿರುವ ಬೇಡಿಕೆಗಳು ವಿಶಾಲ ನೆಲೆಯ ಹೋರಾಟಗಳಾಗಿ ಪರಿವರ್ತನೆಗೊಳ್ಳಲಿದೆ ಎಂದು ಹೇಳಿದರು.

ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ. ಯಾದವ ಶೆಟ್ಟಿ, ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಮ್ಯುನಿಸ್ಟ್ ನೇತಾರ ಕೃಷ್ಣಪ್ಪ ಸಾಲ್ಯಾನ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಸಿಪಿಐಎಂ ಜಿಲ್ಲಾ ನಾಯಕರಾದ ರಫೀಕ್ ಹರೇಕಳ, ಶೇಖರ್ ಕುಂದರ್, ವಿವಿಧ ಸಂಘಟನೆಗಳ ಮುಖಂಡರಾದ ಸುಂದರ ಕುಂಪಲ, ಜನಾರ್ಧನ ಕುತ್ತಾರ್, ರಿಜ್ವಾನ್ ಹರೇಕಳ, ನಿತಿನ್ ಕುತ್ತಾರ್, ಇಬ್ರಾಹಿಂ ಅಂಬ್ಲಮೊಗರು, ಫಾರೂಕ್ ಕಾನೆಕೆರೆ, ಮುಸ್ತಾಕ್ ಆಲಿ, ವಿನಾಯಕ ಶೆಣೈ, ಚಂದ್ರಶೇಖರ ಕಿನ್ಯಾ, ಗಿಲ್ಬರ್ಟ್ ಡಿಸೋಜ, ಕರಿಯ ಕೆ., ಜಯಂತ ನಾಯಕ್, ಪದ್ಮಾವತಿ ಶೆಟ್ಟಿ, ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹಾಬಲ ದೆಪ್ಪಲಿಮಾರ್, ಪಂಚಾಯತ್ ಸದಸ್ಯರಾದ ಗಣೇಶ್ ಅಡ್ಯಂತಾಯ, ರಾಜೇಶ್ವರೀ, ಅಶ್ರಫ್ ಹರೇಕಳ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಿಪಿಐಎಂ ಜಿಲ್ಲಾ ನಾಯಕರಾದ ಬಿ.ಕೆ. ಇಮ್ತಿಯಾಜ್, ಸಂತೋಷ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಪ್ರಮೀಳಾ ಶಕ್ತಿನಗರ, ಯುವಜನ ನಾಯಕರಾದ ನವೀನ್ ಕೊಂಚಾಡಿ, ತಯ್ಯುಬ್ ಬೆಂಗರೆ, ದೀಪಕ್ ಬಜಾಲ್, ಸಾಮಾಜಿಕ ಚಿಂತಕರಾದ ಎಂ. ದೇವದಾಸ್, ಅಸುಂತ ಡಿಸೋಜ, ಫ್ಲೇವಿ ಕ್ರಾಸ್ತಾ ಅತ್ತಾವರ,ಬಿ.ಎನ್. ದೇವಾಡಿಗ, ಓಸ್ವಾಲ್ಡ್ ಪುರ್ತಾಡೋ, ನೆಲ್ಸನ್ ರೋಚ್, ರಮೇಶ್ ಉಳ್ಳಾಲ ಮತ್ತಿತರರು ಭಾಗವಹಿಸಿದ್ದರು

