ಮತೀಯವಾದಿಗಳಿಂದ ವೈದ್ಯಕೀಯ ಸಂಘಟನೆಗಳನ್ನು ವಿಮೋಚನೆಗೆ ಪ್ರಜ್ಞಾವಂತ ವೈದ್ಯರು ಒಗ್ಗೂಡಬೇಕು: ಡಾ. ಶ್ರೀನಿವಾಸ್ ಕಕ್ಕಿಲ್ಲಾಯ

ಮಂಗಳೂರು: ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಸಂಬಂಧ ಎದ್ದಿರುವ ವಿವಾದ ಸಂಬಂಧ ಪ್ರತಿಕ್ರಿಯಿಸಿರುವ ಖ್ಯಾತ ವೈದ್ಯ ಶ್ರೀನಿವಾಸ್ ಕಕ್ಕಿಲ್ಲಾಯ, ದಕ್ಷಿಣ ಕನ್ನಡ ಜಿಲ್ಲೆಯ ವೈದ್ಯಕೀಯ ಸಂಘಟನೆಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಫೇಸ್‌ಬುಕ್‌ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವೈದ್ಯಕೀಯ ಸಂಘಟನೆಗಳು ಯಾವುದಕ್ಕೆ ಪ್ರತಿಭಟನೆ ಮಾಡುತ್ತವೆ, ಹೇಳಿಕೆ ನೀಡುತ್ತವೆ ಮತ್ತು ಯಾವುದಕ್ಕೆ ಪ್ರತಿಭಟನೆ ಅಥವಾ ಹೇಳಿಕೆಗಳಿಲ್ಲದೆ ತೆಪ್ಪಗಿರುತ್ತವೆ ಎನ್ನುವುದನ್ನು ಈಗ ಕೆಲ ವರ್ಷಗಳಿಂದ ಕ್ಷಣ ಮಾತ್ರದಲ್ಲಿ, ಕಣ್ಣು ಕಿವಿ ಮುಚ್ಚಿ ಊಹಿಸಿಕೊಳ್ಳಬಹುದೆನ್ನುವ ಸನ್ನಿವೇಶವಿದೆ. ಇಲ್ಲಿನ ವೈದ್ಯರಿಂದ ಉಗ್ರ ಪ್ರತಿಭಟನೆ, ಪತ್ರಿಕಾಗೋಷ್ಠಿ, ರಸ್ತೆ ತಡೆ ಎಂಬುದೆಲ್ಲ ಆಗುತ್ತದೆ ಎಂದಾದರೆ ಅತ್ತ ಕಡೆ ಮುಸ್ಲಿಂ ಸಮುದಾಯದ ರೋಗಿಗೆ ಸಂಬಂಧಿಸಿದ ವಿಷಯವೇನಾದರೂ ಇದ್ದೇ ಇರಬೇಕು ಅಥವಾ ಬಿಜೆಪಿಯೇತರ ಸರ್ಕಾರವಿರಬೇಕು ಎಂದು ಅಂದಾಜು ಮಾಡಬಲ್ಲಷ್ಟು ಸಾಮಾನ್ಯವಾಗಿ ಹೋಗಿದೆ. ಬಿಜೆಪಿ ಸರಕಾರ ವೈದ್ಯಕೀಯ ವ್ಯವಸ್ಥೆಯನ್ನೇ ನಾಶ ಮಾಡುವ ಕೆಲಸ ನಡೆಸಿದರೂ, ಅಥವಾ ಮುಸ್ಲಿಮೇತರ ರೋಗಿಗಳಿಗೆ ಸಂಬಂಧಿಸಿದಂತೆ ಎಷ್ಟೇ ಗದ್ದಲವಾದರೂ ಇವರು ಒಂದೋ ತೆಪ್ಪಗಿರುತ್ತಾರೆ ಅಥವಾ ಕ್ಷೀಣವಾದ ಹೇಳಿಕೆ ಕೊಟ್ಟು ಸುಮ್ಮನಾಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಪುತ್ತೂರಿನ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯ ಜೊತೆ ವಾಗ್ವಾದವಾದ ಸಂಬಂಧ ಪೊಲೀಸ್ ದೂರು ದಾಖಲಿಸಿದ್ದು, ಬಳಿಕ ಪ್ರತಿಭಟನೆ ನಡೆಸಲಾಗಿದೆ. ಆದರೆ ಅದರಲ್ಲಿ ಕೇವಲ ಬೆರಳೆಣಿಕೆಯ ವೈದ್ಯರಷ್ಟೇ ಭಾಗವಹಿಸಿದ್ದರಿಂದ ರಸ್ತೆ ತಡೆ ನಡೆಸಲು ಹಿಂದುತ್ವ ಸಂಘಟನೆಯ ಬೆಂಬಲ ಪಡೆದದ್ದು, ಮಂಗಳೂರಿನ ಐಎಂಎಯಿಂದಲೂ ಹೇಳಿಕೆ ಹೊರಡಿಸಿದ್ದೂ ಆಗಿವೆ. ಮೂರು ತಿಂಗಳ ಹಿಂದೆ ಅದೇ ಊರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದ್ದ ಶಸ್ತ್ರಕ್ರಿಯೆಯಲ್ಲಿ ಲೋಪವಾಯಿತೆಂದು ಸಂತ್ರಸ್ತೆಯ ಪತಿ ವಿಡಿಯೋ, ಎಕ್ಸ್ ಖಾತೆ ಎಲ್ಲ ಕಡೆ ಪ್ರಕಟಿಸಿ, ದೇಶದಾದ್ಯಂತ ಮಾಧ್ಯಮಗಳಲ್ಲಿ ವರದಿಯಾದರೂ ಈ ವೈದ್ಯಕೀಯ ಸಂಘಟನೆಗಳಿಂದ ಹೇಳಿಕೆಯೋ, ಖಂಡನೆಯೋ ಬರಲಿಲ್ಲ. ನಾಲ್ಕು ವರ್ಷಗಳ ಹಿಂದೆ ಕೋವಿಡ್ ನೆಪದಲ್ಲಿ ಗರ್ಭಿಣಿಗೆ ತೊಂದರೆಯಾಗಿ ಮನೆಮಂದಿ ಗದ್ದಲ ಮಾಡಿದಾಗ ಇದೇ ವೈದ್ಯರು ಚೀರಾಟ, ಹೋರಾಟ, ಪ್ರತಿಭಟನೆ ನಡೆಸಿದ್ದು, ಅದಾಗಿ ಕೆಲವೇ ತಿಂಗಳಲ್ಲಿ ಇನ್ನೊಬ್ಬರು ಪ್ರಸವದ ಬಳಿಕ ಮೃತಪಟ್ಟು ಮನೆಯವರೂ, ಇತರರೂ ಪ್ರತಿಭಟಿಸಿದಾಗ ವೈದ್ಯರ ಕಡೆಯಿಂದ ಒಂದಕ್ಷರ ಹೊರಬರಲಿಲ್ಲ. ಇವೆರಡರಲ್ಲಿ ಯಾರು ಯಾವ ಸಮುದಾಯದವರಾಗಿದ್ದರೆಂದು ಊಹಿಸುವುದು ಕಷ್ಟವಾಗದು ಎಂದು ಡಾ. ಶ್ರೀನಿವಾಸ್ ಕಕ್ಕಿಲ್ಲಾಯ ಹೇಳಿದ್ದಾರೆ.

ವೈದ್ಯರ ಈ ಮತೀಯ ಪಕ್ಷಪಾತವು ರೋಗಿಗಳಿಗಷ್ಟೇ ಸೀಮಿತವಾಗಿಲ್ಲ. ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳಾದಾಗ ಗಾಯಾಳುಗಳನ್ನು ದಾಖಲಿಸಿದ್ದ ಎರಡು ಆಸ್ಪತ್ರೆಗಳಿಗೆ ಪೋಲೀಸರು ದಾಳಿ ಮಾಡಿ, ಅಶ್ರುವಾಯು ಸಿಡಿಸಿ, ಗಾಯಾಳುಗಳಿದ್ದ ತೀವ್ರ ನಿಗಾ ಘಟಕ ಹಾಗೂ ಕೊಠಡಿಗಳಿಗೆ ನುಗ್ಗಲು ಯತ್ನಿಸಿದ ಘಟನೆಗಳಾಗಿದ್ದವು. ಐಎಂಎಯ ರಾಷ್ಟ್ರೀಯ ಘಟಕವು ಇದನ್ನು ತೀವ್ರವಾಗಿ ಖಂಡಿಸಿ ಹೇಳಿಕೆಯನ್ನು ನೀಡಿತ್ತು. ಆದರೆ ಸ್ಥಳೀಯ ವೈದ್ಯಕೀಯ ಸಂಘಟನೆಗಳು ಈ ಆಸ್ಪತ್ರೆಗಳಲ್ಲಿ ಪೋಲೀಸರ ಅತಿಕ್ರಮಣವನ್ನು ಸಮರ್ಥಿಸಿದ್ದಲ್ಲದೆ, ರಾಷ್ಟ್ರೀಯ ಐಎಂಎಯ ಹೇಳಿಕೆಯನ್ನು ವಿರೋಧಿಸಿದ್ದವು. ಅಷ್ಟೇ ಅಲ್ಲ, ಪ್ರತಿಭಟನೆಯ ವೇಳೆ ಗೋಲೀಬಾರ್ ನಡೆದುದನ್ನೂ ಸಮರ್ಥಿಸಿ, ವೈದ್ಯರ ಮೇಲೆ ಎಲ್ಲಾ ದಾಳಿಗಳಿಗೆ ಕಾರಣ ಆಗುತ್ತಿರುವ ಸಮುದಾಯದ ಮೇಲೆ ಇಂತಹ ಕ್ರಮಗಳು ತಪ್ಪಲ್ಲ ಎಂದು ಹೇಳಿದ್ದವು. ಆಸ್ಪತ್ರೆಗಳನ್ನೂ ಕೂಡ ಮತೀಯವಾಗಿ ವಿಭಜಿಸುವ ಸಂಘಟನೆಗಳಿವು ಎಂದು ಡಾ. ಶ್ರೀನಿವಾಸ್ ಕಕ್ಕಿಲ್ಲಾಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಪ್ರಮುಖ ವೈದ್ಯಕೀಯ ಸಂಘಟನೆಗಳನ್ನು ಮತೀಯವಾದಿ ವೈದ್ಯರು ವಶಪಡಿಸಿಕೊಂಡು ಹಲವು ವರ್ಷಗಳೇ ಆಗಿವೆ. ದೇಶದ ಆಧುನಿಕ ವೈದ್ಯ ವಿಜ್ಞಾನದ ವೈದ್ಯಕೀಯ ಕಾಲೇಜುಗಳನ್ನು, ವೈದ್ಯಕೀಯ ಪ್ರವೇಶಾತಿಯನ್ನು, ವೈದ್ಯಕೀಯ ವೃತ್ತಿಯನ್ನು ನಿಯಂತ್ರಿಸುವ ಎಲ್ಲಾ ಕೆಲಸಗಳನ್ನು ಮಾಡುವ, ರಾಷ್ಟ್ರೀಯ ವೈದ್ಯಕೀಯ ಆಯೋಗ ಎನ್‌ಎಂಸಿಯಲ್ಲಿ ಈಗ ಒಬ್ಬರೇ ಒಬ್ಬ ಸದಸ್ಯನಿಲ್ಲದೆ ಕೇಂದ್ರ ಸರಕಾರದ ಯಾರೋ ಕಿರಿಯ ಅಧಿಕಾರಿಯೇ ಕಾರುಬಾರು ಮಾಡುತ್ತಿದ್ದರೂ ಮತೀಯವಾದದ ಅಮಲಿಗೆ ಬಿದ್ದಿರುವ ಈ ವೈದ್ಯಕೀಯ ಸಂಘಟನೆಗಳು ತೆಪ್ಪಗಿವೆ. ಈ ಎನ್‌ಎಂಸಿಯ ಬಗ್ಗೆ ಬರೆದುದನ್ನು ತಮ್ಮ ಶಾಖೆಯ ಪತ್ರಿಕೆಯಲ್ಲಿ ಪ್ರಕಟಿಸಲು ಧೈರ್ಯವಿಲ್ಲದೆ ಅಂಜಿಕೊಳ್ಳುವಷ್ಟು ದುರ್ಬಲಗೊಂಡಿವೆ! ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ಎಂಬಿಬಿಎಸ್ ಪಠ್ಯಕ್ರಮದಲ್ಲಿ ಆಯುರ್ವೇದ, ಯೋಗ ಇತ್ಯಾದಿ ಕಲಬೆರಕೆ ಮಾಡುತ್ತಿರುವುದನ್ನು ವಿರೋಧಿಸುವ ಬದಲಿಗೆ ಇವು ಸಮರ್ಥಿಸುತ್ತಿವೆ. ತಮ್ಮ ವೃತ್ತಿಯ ನಿಯಂತ್ರಣ ಮತ್ತು ಆಧುನಿಕ ವೈದ್ಯವಿಜ್ಞಾನಗಳು ಮಣ್ಣು ಪಾಲಾದರೂ ಮಾತೆತ್ತುವುದಿಲ್ಲ, ಆದರೆ ಒಂದು ನಿರ್ದಿಷ್ಟ ಸಮುದಾಯದ ರೋಗಿಗಳ ವಿರುದ್ಧ ದಿಢೀರ್ ಬೀದಿಗಿಳಿದು ಪ್ರತಿಭಟಿಸಲು ಸಿದ್ಧ ಎಂದು ಈ ಸಂಘಟನೆಗಳು ನಿರ್ಧರಿಸಿದಂತಿದೆ ಎಂದು ಅವರು ಹೇಳಿದ್ದಾರೆ.

ಇಂತಹ ಮತೀಯವಾದಿ ವೈದ್ಯರ ಬಗ್ಗೆ ಪೋಲೀಸ್ ವ್ಯವಸ್ಥೆಗೂ ಸಹಾನುಭೂತಿ ಇದ್ದಂತಿದೆ. ಇವರು ಏನೇ ದೂರು ಕೊಟ್ಟರೂ ಕೇಸು ದಾಖಲಾಗುತ್ತದೆ. ಇವರ ವಿರುದ್ಧ ಗಂಭೀರ ಆಪಾದನೆಗಳ ದೂರಿತ್ತರೂ ಏನೂ ಆಗುವುದಿಲ್ಲ. ಕಳೆದ ವರ್ಷ ಜುಲೈಯಲ್ಲಿ ಬ್ರಹ್ಮಾವರದ ವೈದ್ಯನೊಬ್ಬ ಮುಸ್ಲಿಮರನ್ನು ತೊಡೆದು ಹಾಕಬೇಕು ಎಂದು ಬರೆದದ್ದಕ್ಕೆ ರಾಜ್ಯದ ಪೋಲೀಸ್ ವರಿಷ್ಠರವರೆಗೆ ದೂರು ನೀಡಲಾಗಿತ್ತಾದರೂ ಏನೂ ಆಗಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯ ವೇಳೆ ವೈದ್ಯನೊಬ್ಬ ನೆರೆಯ ಕೇರಳವನ್ನು ಭಯೋತ್ಪಾದಕರ, ಮತೀಯ ಗಲಭೆಗಳ ತಾಣವೆಂದು ಬರೆದರೂ ಏನೂ ಆಗಲಿಲ್ಲ ಎಂದು ಪೊಲೀಸ್‌ ಇಲಾಖೆಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯು ಸ್ವಾತಂತ್ರ್ಯಪೂರ್ವದಿಂದಲೇ ಅತ್ಯುತ್ತಮ ವೈದ್ಯಕೀಯ ಆರೈಕೆಗೆ ಹೆಸರಾಗಿತ್ತು, ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕೇರಳಗಳ ಜನರು ವೈದ್ಯಕೀಯ ಸೌಲಭ್ಯಗಳನ್ನರಸಿ ಇಲ್ಲಿಗೆ ಬರುತ್ತಿದ್ದರು. ಈಗಲೂ ಅಂತಹ ವಿಶ್ವಾಸವು ಸಾಕಷ್ಟು ಉಳಿದುಕೊಂಡಿದೆ. ಜಿಲ್ಲೆಯ ಎಂಟು ವೈದ್ಯಕೀಯ ಕಾಲೇಜುಗಳಲ್ಲಿ ದೇಶದ ಎಲ್ಲಾ ರಾಜ್ಯಗಳಿಂದ ಬಂದಿರುವ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ (ಈಗೆರಡು ವರ್ಷಗಳಲ್ಲಿ ಆ ಕೆಲವು ವಿದ್ಯಾರ್ಥಿಗಳ ಮೇಲೂ ನೈತಿಕತೆಯ ಹೆಸರಲ್ಲಿ ದಾಳಿಗಳಾಗಿವೆ, ಆ ಬಗ್ಗೆಯೂ ಈ ವೈದ್ಯಕೀಯ ಸಂಘಟನೆಗಳು ಚಕಾರವೆತ್ತಿಲ್ಲ). ಜಿಲ್ಲೆಯ ಬಹುತೇಕ ವೈದ್ಯರು ಮತೀಯವಾದಿಗಳೇನೂ ಆಗಿಲ್ಲದಿದ್ದರೂ ಮತೀಯವಾದಿ ವೈದ್ಯರನ್ನು ತಡೆಯುವ ಅಥವಾ ಎದುರಿಸುವ ಧೈರ್ಯವನ್ನಂತೂ ಹೊಂದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ತಮ್ಮೊಳಗಿನ ಮತೀಯ ವಿಕೃತಿಯನ್ನು ಮೆರೆಸುವ ಮೂಲಕ ತಮ್ಮ ವೈಯಕ್ತಿಕ ಪೂರ್ವಗ್ರಹ ಹಾಗೂ ಹತಾಶೆಗಳನ್ನು ನೀಗಿಸಿಕೊಳ್ಳಲು ಯತ್ನಿಸುವ ಈ ನಾಲ್ಕೈದು ವೈದ್ಯರ ಕುಚೇಷ್ಟೆಗಳಿಗೆ ಎಲ್ಲಾ ವೈದ್ಯರನ್ನು ಮತ್ತು ವೈದ್ಯಕೀಯ ವೃತ್ತಿಯ ಉನ್ನತ ಆದರ್ಶಗಳನ್ನು ಪ್ರತಿನಿಧಿಸುವ ವೈದ್ಯಕೀಯ ಸಂಘಟನೆಗಳನ್ನು ಒಪ್ಪಿಸಬಾರದು, ಈಗಾಗಲೇ ಅಂಥವರ ಮುಷ್ಟಿಯೊಳಗೆ ನಲುಗುತ್ತಿರುವ ಸಂಘಟನೆಗಳನ್ನು ಈ ಕೂಡಲೇ ವಿಮೋಚನೆಗೊಳಿಸಲು ಎಲ್ಲಾ ಪ್ರಜ್ಞಾವಂತ ವೈದ್ಯರೂ ಒಗ್ಗೂಡಿ ಕಾರ್ಯಪ್ರವೃತ್ತರಾಗಬೇಕು, ಆ ಮೂಲಕ ಅತ್ಯುತ್ತಮ ವೈದ್ಯಕೀಯ ಸೇವೆಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯು ಪಡೆದಿರುವ ಗೌರವವನ್ನು ಉಳಿಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

News Editor

Learn More →

Leave a Reply

Your email address will not be published. Required fields are marked *