ಮುಲ್ಕಿ ಉಳಿಪ್ಪಾಡಿಯಲ್ಲಿ ಅಕ್ರಮ ಮರಳುಗಾರಿಕೆ ದಂಧೆ; ಗ್ರಾಮ ಪಂಚಾಯತ್ ಅಧ್ಯಕ್ಷರೇ ಅಕ್ರಮದಲ್ಲಿ ಶಾಮೀಲಂತೆ.

ಮಂಗಳೂರು ತಾಲೂಕಿನ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಉಳಿಪ್ಪಾಡಿ ಕರಿಯತ್ತಲ ಗುಂಡಿ ಏತ ನೀರಾವರಿ ಪಂಪು ಬಳಿ ದಿನಂಪ್ರತಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಯಾವುದೇ ದಾಖಲೆ ಪತ್ರಗಳಿಲ್ಲದೆ ಮರಳು ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.

ಎಲ್ಲಾ ಕಾನೂನು ಕ್ರಮಗಳನ್ನು ಗಾಳಿಗೆ ತೂರಿ ಇಲ್ಲಿ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿದೆ. ಐಕಳ ಪಂಚಾಯತ್ ಅಧ್ಯಕ್ಷರ ಮುಂದಾಳತ್ವದಲ್ಲಿಯೇ ಅಕ್ರಮ ಮರಳು ಸಾಗಾಟ ಪ್ರತಿನಿತ್ಯ ಹಗಲು ರಾತ್ರಿ ನಡೆಸಲಾಗುತ್ತಿದೆ ಎಂಬ ಆರೋಪ ನಾಗರಿಕರದ್ದು. ಮುಲ್ಕಿ ಠಾಣಾ ಪೊಲೀಸರು, ಗಣಿ-ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮತ್ತು ಮುಲ್ಕಿ ವಿಭಾಗದ ಕಂದಾಯ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲವೆಂದು ನಾಗರಿಕರು ದೂರಿಕೊಂಡಿದ್ದಾರೆ. ಸ್ಥಳೀಯ ತಹಶೀಲ್ದಾರ್ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವವರು ಸ್ಥಳೀಯ ಮಹಿಳೆಯರೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿದ್ದಾರೆ. ಇದನ್ನು ಆಕ್ಷೇಪಿಸುವ ಸ್ಥಳೀಯರ ವಿರುದ್ಧ ಗೂಂಡಾಗಿರಿ ನಡೆಸಲಾಗುತ್ತಿದೆ. ರಾತ್ರಿ ಮರಳು ಸಾಗಾಟ ನಡೆಸುವ ಚಾಲಕರು ಮತ್ತು ಸಿಬ್ಬಂದಿಗಳು ಮದ್ಯಪಾನ ಮಾಡಿ ಸ್ಥಳೀಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಇಳಲು ಸಾರ್ವಜನಿಕರದ್ದು.

ಅಕ್ರಮ ಮರಳು ಸಾಗಾಟ ನಡೆಸುವ ಬಹುತೇಕ ಲಾರಿಗಳ ಚಾಲಕರಿಗೆ ಲೈಸನ್ಸ್ ಇಲ್ಲ. ವಾಹನದ ಫಿಟ್ನೆಸ್ ಸರ್ಟಿಫಿಕೇಟ್ ಕೊನೆಗೊಂಡು ತಿಂಗಳುಗಳೇ ಕಳೆದಿವೆ. ಈ ಬಗ್ಗೆ ಆರ್ ಟಿ ಓ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲವಂತೆ.

ಪೊಲೀಸ್, ಕಂದಾಯ, ತಹಶೀಲ್ದಾರ್ ಮತ್ತು ಗಣಿ-ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ತಿಂಗಳ ಮಾಮೂಲಿ ನೀಡಿಯೇ ಮರಳುಸಾಗಾಟ ನಡೆಸುತ್ತಿದ್ದೇವೆ ಎಂದು ಅಕ್ರಮ ಮರಳು ಸಾಗಾಟದಾರರು ರಾಜಾರೋಷವಾಗಿ ಹೇಳುತ್ತಿದ್ದಾರೆ.

ಸ್ಥಳೀಯ ಪಂಚಾಯತ್ ಅಧ್ಯಕ್ಷರೇ ಅಕ್ರಮದಲ್ಲಿ ಭಾಗಿಯಾಗಿದ್ದು ಪೊಲೀಸರು, ಪತ್ರಕರ್ತರು, ರಾಜಕಾರಣಿಗಳು ನಾನು ಹೇಳಿದಂತೆ ಕೇಳುತ್ತಿದ್ದಾರೆ ಎಂದು ಹೇಳಿ ಸ್ಥಳೀಯರನ್ನು ಬೆದರಿಸುತ್ತಿದ್ದಾರಂತೆ. ಸ್ಥಳೀಯ ಚಾನೆಲ್ ಗಳಿಂದ ಹಿಡಿದು ರಾಜ್ಯಮಟ್ಟದ ಚಾನೆಲ್ ಗಳ ತನಕ ಸಂಪರ್ಕವಿದೆ ಎಂದು ಹೇಳುತ್ತಿದ್ದಾರಂತೆ.

ಮಂಗಳೂರು ಪೊಲೀಸ್ ಕಮಿಷನರ್ ಸಾಹೇಬರು, ಜಿಲ್ಲಾಧಿಕಾರಿಗಳು
ದಯವಿಟ್ಟು ಈ ಬಗ್ಗೆ ಪರಿಶೀಲಿಸಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಗ್ರಾಮಸ್ಥರು ವಿನಂತಿಸಿಕೊಂಡಿದ್ದಾರೆ.

News Editor

Learn More →

Leave a Reply

Your email address will not be published. Required fields are marked *