ಬಾವಿಯ ಆವರಣ ಗೋಡೆ ಸ್ವಚ್ಛ ಮಾಡುತ್ತಿದ್ದ ವೇಳೆ ವ್ಯಕ್ತಿಯೋರ್ವರು ಆಯತಪ್ಪಿ ಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಕೋಟೆಕಾರು ನೆಲ್ಲಿಸ್ಥಳ ಕಾಳಿಕಾಂಬ ದೇವಸ್ಥಾನದ ಬಳಿಯ ನೆತ್ತಿಲ ಎಂಬಲ್ಲಿ ನಡೆದಿದೆ.

ಉಳ್ಳಾಲ, ಸೆ.29: ಬಾವಿಯ ಆವರಣ ಗೋಡೆ ಸ್ವಚ್ಛ ಮಾಡುತ್ತಿದ್ದ ವೇಳೆ ವ್ಯಕ್ತಿಯೋರ್ವರು ಆಯತಪ್ಪಿ ಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಕೋಟೆಕಾರು ನೆಲ್ಲಿಸ್ಥಳ ಕಾಳಿಕಾಂಬ ದೇವಸ್ಥಾನದ ಬಳಿಯ ನೆತ್ತಿಲ ಎಂಬಲ್ಲಿ ನಡೆದಿದೆ.
ಕೋಟೆಕಾರು ನೆತ್ತಿಲದ ಬಾಡಿಗೆ ಮನೆಯಲ್ಲಿ ವಾಸವಿದ್ದ ನವೀನ್ ಬೆಳ್ಚಾಡ(48) ಮೃತ ವ್ಯಕ್ತಿ. ನವೀನ್ ಅವರು ಭಾನುವಾರ ಸಂಜೆ ಸುಮಾರು 3.45ರ ವೇಳೆ ಮನೆಯ ಹಿಂಭಾಗದ ಬಾವಿಯ ಆವರಣ ಗೋಡೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಮನೆಯೊಳಗೆ ನವೀನ್ ಕಾಣದಾಗ ಪತ್ನಿ ಮತ್ತು ಮಕ್ಕಳು ಹುಡುಕಾಡಿದ್ದು ಬಾವಿಯ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರು ಸೇರಿ ನವೀನ್ ಅವರನ್ನು ಬಾವಿಯಿಂದ ಮೇಲಕ್ಕೆತ್ತಿದ್ದು ಅದಾಗಲೇ ಅವರು ಮೃತಪಟ್ಟಿದ್ದರು.
ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ನವೀನ್ ಅವರಿಗೆ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಪುತ್ರಿ ಮತ್ತು ನಾಲ್ಕನೇ ತರಗತಿ ಓದುತ್ತಿರುವ ಪುತ್ರನಿದ್ದಾನೆ. ಉಳ್ಳಾಲ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿದ್ದಾರೆ


