ಆಕಾಂಕ್ಷಿಯಲ್ಲ ಎಂದರೂ ಕಟೀಲ್ ಹೆಸರು ಮುಂಚೂಣಿ:ಕರಾವಳಿಯಲ್ಲಿ ಕಾಂಗ್ರೆಸ್ ಎದುರಿಸಲು ನಳಿನ್‌ಗೆ ಪರಿಷತ್ ಟಿಕೆಟ್ ಕೊಡಿ ಎಂದ ಶಾಸಕರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾಗಿರುವ ಪರಿಷತ್ ಸ್ಥಾನಕ್ಕೆ ಚುನಾವಣಾ ದಿನಾಂಕ ಘೋಷಣೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಜನ ಪ್ರತಿನಿಧಿಗಳಿಂದ ಆಯ್ಕೆಯಾಗುವ ಪರಿಷತ್ ಸ್ಥಾನಕ್ಕೆ ಭಾರತೀಯ ಜನತಾ ಪಾರ್ಟಿಯಲ್ಲಿ ಪೈಪೋಟಿ ಜೋರಾಗಿದ್ದು ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಗರಿಗೆದರಿಸಿದೆ. 

ಈ ಪೈಕಿ ಕರ್ನಾಟಕ ರಾಜ್ಯ ಬಿಜೆಪಿ ಘಟಕದ ನಿಕಟಪೂರ್ವ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲು ರವರ ಹೆಸರು ಮುಂಚೂಣಿಯಲ್ಲಿದೆ ಎಂಬುದು ಪಕ್ಷದ ಆಂತರಿಕ ಮೂಲಗಳ ಮಾಹಿತಿಯಾಗಿದೆ. ಇತ್ತೀಚೆಗೆ‌ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ, ಪ್ರೀತಮ್ ಗೌಡ ಮಂಗಳೂರಿನಲ್ಲಿ ಪಕ್ಷದ ಸಭೆ ನಡೆಸಿದ್ದು ಅಭಿಪ್ರಾಯವನ್ನು ಸಂಗ್ರಹಿಸಿದ್ದರು. ಈ ಸಭೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಬಹುತೇಕ ಶಾಸಕರು ನಳಿನ್ ಕುಮಾರ್ ಕಟೀಲು ರವರ ಹೆಸರನ್ನು ಆಯ್ಕೆ ಮಾಡಿದ್ದು ಬಹುತೇಕ ಪಕ್ಷದ ಮುಖಂಡರು ಕೂಡ ನಳಿನ್ ಕುಮಾರ್ ಕಟೀಲು ರವರಿಗೆ ಅವಕಾಶ ಕೊಡಬೇಕು ಎಂಬ ಒತ್ತಾಸೆಯನ್ನು ಮಂಡಿಸಿದ್ದಾರೆ. ಮಾತ್ರವಲ್ಲದೆ ಒಂದಷ್ಟು ಪದಾಧಿಕಾರಿಗಳನ್ನು ಬಿಟ್ಟರೆ ಉಳಿದ ಬಹುತೇಕ ಎಲ್ಲಾ ಪದಾಧಿಕಾರಿಗಳು ನಳಿನ್ ಕುಮಾರ್ ಕಟೀಲುರವರಿಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಕೂಡ ನಳಿನ್ ಕುಮಾರ್ ಕಟೀಲ್ ರವರ ಪರವಾಗಿ ಒಲವನ್ನು ಹೊಂದಿದ್ದಾರೆ ಎಂಬುವುದು ಬಲಮೂಲಗಳಿಂದ ಮಾಹಿತಿ. ಈ ಬಗ್ಗೆ‌ ಅದೇ ಸಭೆಯಲ್ಲಿ ನಳಿನ್ ಕುಮಾರ್ ಕಟೀಲ್ ರವರ ಅಭಿಪ್ರಾಯವನ್ನು ಕೇಳಿದಾಗ “ಪಕ್ಷ ಸೂಚಿಸಿದವರಿಗೆ ತಮ್ಮ ಬೆಂಬಲವನ್ನು ಕೊಡುತ್ತೇನೆ, ನಾನಾಗಿ ಯಾವುದೇ ಟಿಕೆಟ್ ಆಕಾಂಕ್ಷಿಯಲ್ಲ ಕೇಳುವುದು ಇಲ್ಲ” ಎಂಬ ವಾದವನ್ನು ಬೊಮ್ಮಾಯಿ ಹಾಗೂ ಪ್ರೀತಂ ಗೌಡ ಮುಂದೆ ಮಂಡಿಸಿದ್ದಾರೆ ಎಂಬುದು ಬಸವರಾಜ್ ಬೊಮ್ಮಾಯಿ ಹಾಗೂ ಪ್ರೀತಮ್ ಗೌಡ ಅವರ ಆಪ್ತ ವಲಯದಲ್ಲಿ ಕೇಳಿ ಬಂದಿರುವ ಮಾತಾಗಿದೆ. ಅನೇಕ ಶಾಸಕರಿಗೆ ಈ ಬಗ್ಗೆ ಗೊಂದಲ ಉಂಟಾಗಿದ್ದು ನಳಿನ್ ಕುಮಾರ್ ಕಟೀಲ್ ರವರು ಪ್ರಯತ್ನಪಟ್ಟರೆ ಟಿಕೆಟ್ ದಕ್ಕಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಆದರೆ ಅವರು ಈ ಬಗ್ಗೆ ಪ್ರಯತ್ನ ಮಾಡುವುದಿಲ್ಲ ಎಂದು ಅಭಿಪ್ರಾಯವನ್ನು ಕಾರ್ಯಕರ್ತರಲ್ಲಿ ಹಂಚಿಕೊಂಡಿದ್ದಾರೆ. 

ಇಷ್ಟಾಗಿಯೂ ರಾಜ್ಯ ಬಿಜೆಪಿ ಘಟಕ ಮತ್ತು ರಾಷ್ಟ್ರೀಯ ನಾಯಕರಲ್ಲಿ ನಳಿನ್ ಕುಮಾರ್ ಕಟೀಲ್ ರವರಿಗೆ ವಿಧಾನ ಪರಿಷತ್ ಚುನಾವಣೆಗೆ ಅವಕಾಶ ನೀಡಬೇಕು ಎಂಬುದು ಚರ್ಚೆಯಾಗಿದೆ. ರಾಜ್ಯ ಘಟಕದ ಅಧ್ಯಕ್ಷರಾಗಿ ಸುದೀರ್ಘಕಾಲ ಸೇವೆ ನಡೆಸಿ ನಿರಂತರವಾಗಿ ಪಕ್ಷ ಸಂಘಟನೆಗೆ ಒತ್ತು ನೀಡಿ ನಾಲ್ಕು ವರ್ಷಗಳ ಅವಧಿಯಲ್ಲಿ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಉಂಟಾಗದಂತೆ ನೋಡಿಕೊಂಡು ಮೂರು ಬಾರಿ ಲೋಕಸಭಾ ಕ್ಷೇತ್ರದ ಸಂಸದರಾಗಿ ಕರ್ತವ್ಯ ನಿರ್ವಹಿಸಿದ್ದ ನಳಿನ್ ಕುಮಾರ್ ಕಟೀಲ್ ರವರು ಯಾವುದೇ ಲಾಬಿ ನಡೆಸದೇ ಇದ್ದದ್ದು ಮತ್ತು ಬಣ ರಾಜಕೀಯದಿಂದ ಕಳೆದ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪುವಂತೆ ಮಾಡಿತ್ತು. ಇದು ಜಿಲ್ಲೆಯ ಹಾಗೂ ರಾಜ್ಯದ ಬಿಜೆಪಿ ನಾಯಕರಲ್ಲಿ ಮತ್ತು ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿತ್ತು. ಹಾಗಾಗಿ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂಬುದು ಕರಾವಳಿ ಭಾಗದ ಶಾಸಕರ ಆಗ್ರಹವಾಗಿತ್ತು. ಈ ನಡುವೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಕೂಡ ನಳಿನ್ ಕುಮಾರ್ ಕಟೀಲ್ ರವರಿಗೆ ಈ ಬಾರಿ ಅವಕಾಶ ಕೊಡಬೇಕು ಎಂಬ ಚಿಂತನೆಯಲ್ಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ನಳಿನ್ ಕುಮಾರ್ ಕಟೀಲ್ ರವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದು ಸದ್ಯ ಕಾಂಗ್ರೆಸ್ ಪಕ್ಷದ ದುರಾಡಳಿತವನ್ನು ಎದುರಿಸುವಲ್ಲಿ ಸಮರ್ಥ ನಾಯಕರ ಕೊರತೆಯನ್ನು ಬಿಜೆಪಿ ಎದುರಿಸುತ್ತಿದ್ದು ನಳಿನ್ ಕುಮಾರ್ ಕಟೀಲ್ ರವರಿಗೆ ಅವಕಾಶಕೊಟ್ಟರೆ ಕರಾವಳಿ ಭಾಗದಲ್ಲಿ ಪಕ್ಷ ಮತ್ತಷ್ಟು ಬಲಿಷ್ಠಗೊಳಿಸಬಹುದು ಎಂಬುವುದು ರಾಜ್ಯ ಬಿಜೆಪಿ ನಾಯಕರ ಚಿಂತನೆಯಾಗಿದೆ. ನಳಿನ್ ಆಯ್ಕೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಸಮ್ಮತಿ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಬಿಜೆಪಿ ರಾಜ್ಯ ಘಟಕದ ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಕಟೀಲ್ ರವರ ಬಳಿ ನಿಮಗೆ ಅನ್ಯಾಯವಾಗಿದೆ ನಿಮಗೆ ಸೂಕ್ತ ಸ್ಥಾನಮಾನ ಕೊಡುತ್ತೇವೆ ಎಂದು ಭರವಸೆ ನೀಡಿದ್ದರಂತೆ.

ಈ ಹಿಂದೆ ವಿಧಾನ ಪರಿಷತ್ ಸ್ಥಾನವನ್ನು ಅಲಂಕರಿಸಿದ್ದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಕೂಡಾ ನಳಿನ್ ಕುಮಾರ್ ಕಟೀಲುರವರ ಹೆಸರಿಗೆ ಸಮ್ಮತಿ ಸೂಚಿಸಿ ಪಕ್ಷ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕೆಂಬ ಸಲಹೆಯನ್ನು ರಾಜ್ಯ ನಾಯಕರಿಗೆ ನೀಡಿದ್ದಾರೆ ಎನ್ನಲಾಗಿದೆ.

ಅಂತೂ ವಿಧಾನಪರಿಷತ್ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ಅಭ್ಯರ್ಥಿಯಾಗಲಿದ್ದಾರೆ ಎಂಬುದು ಅತಿ ಕುತೂಹಲ ಕೆರಳಿಸುವಂತಹ ವಿಷಯವಾಗಿದೆ.

News Editor

Learn More →

Leave a Reply

Your email address will not be published. Required fields are marked *