ಮೈಸೂರು– ಮಂಗಳೂರು ಹೆದ್ದಾರಿಯಲ್ಲಿ ಕಾರೊಂದು ಬೆಂಕಿಗಾಹುತಿಯಾಗಿ, ತನ್ನಿಂದತಾನೆ ಚಲಿಸಿ ಕೆಲಕಾಲ ಆತಂಕ ಸೃಷ್ಟಿಸಿತು.

ಮಡಿಕೇರಿ: ನಗರದ ಹೊರವಲಯದ ಸಂಪಿಗೆಕಟ್ಟೆ ಬಳಿಯ ಮೈಸೂರು– ಮಂಗಳೂರು ಹೆದ್ದಾರಿಯಲ್ಲಿ ಕಾರೊಂದು ಬೆಂಕಿಗಾಹುತಿಯಾಗಿ, ತನ್ನಿಂದತಾನೆ ಚಲಿಸಿ ಕೆಲಕಾಲ ಆತಂಕ ಸೃಷ್ಟಿಸಿತು. ಅಗ್ನಿಶಾಮಕಪಡೆಯ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸುವವರೆಗೂ ಇಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಮೈಸೂರು ಮತ್ತು ಮಂಗಳೂರು ಕಡೆಗೆ ಭಾರಿ ಸಂಖ್ಯೆಯ ವಾಹನಗಳು ನಿಂತು, ವಾಹನ ದಟ್ಟಣೆ ಉಂಟಾಗಿತ್ತು.

ಬೆಂಗಳೂರಿನ ಶ್ರೀನಿವಾಸ್ ಎಂಬುವವರಿಗೆ ಸೇರಿದ ಕಾರು ಶನಿವಾರ ಬೆಳಿಗ್ಗೆ ಆವರಿಸಿದ್ದ ದಟ್ಟ ಮಂಜಿನಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾದವು. ರಸ್ತೆಬದಿ ನಿಂತಿದ್ದ ಕಾರಿನಲ್ಲಿ ಸಂಜೆ ಹೊತ್ತಿಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕಾರು ಧಗಧಗಿಸತೊಡಗಿತು. ವಿಚಿತ್ರ ಎಂದರೆ, ಕಾರು ತನ್ನಿಂದ ತಾನೆ ತುಸು ದೂರು ಚಲಿಸಿ ತಿರುಗಿ, ಹೆದ್ದಾರಿಯ ಮಧ್ಯ ಭಾಗದಲ್ಲಿ ನಿಂತಿತು. ಇದರಿಂದ ಎರಡೂ ಕಡೆ ನಿಂತಿದ್ದ ವಾಹನಗಳ ಚಾಲಕರು, ಹಾಗೂ ಪ್ರಯಾಣಿಕರು ಆತಂಕಗೊಂಡರು.

ಕೂಡಲೇ ಸ್ಥಳಕ್ಕೆ ಬಂದ ಸಂಚಾರ ಪೊಲೀಸರು ಒಮ್ಮೆ ಕಾರು ತನ್ನಿಂದ ತಾನೆ ಚಲಿಸಿದ್ದನ್ನು ಕಂಡು ಸುತ್ತಮುತ್ತಲಿದ್ದ ವಾಹನಗಳನ್ನು, ಜನರನ್ನು ದೂರಕ್ಕೆ ಕಳುಹಿಸಿ ಅಗ್ನಿಶಾಮಕ ಠಾಣೆಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಾರಿಗೆ ಹೊತ್ತಿದ್ದ ಬೆಂಕಿಯನ್ನು ನಂದಿಸಿ, ಕಾರನ್ನು ಪಕ್ಕಕ್ಕೆ ಸರಿಸಿ ನಿಲ್ಲಿಸಿ, ಸಂಚಾರವನ್ನು ಪುನರ್‌ ಆರಂಭಿಸಿದರು.

‘ಅಪಘಾತಕ್ಕೀಡಾಗಿ ರಸ್ತೆ ಬದಿ ನಿಲ್ಲಿಸಿದ್ದ ಕಾರಿನೊಳಗಿದ್ದ ಬ್ಯಾಟರಿಯಲ್ಲೋ ಅಥವಾ ಇನ್ನಾವ ಭಾಗದಲ್ಲೋ ಶಾರ್ಟ್ ಸ‌ರ್ಕೀಟ್ ಆಗಿ ಬೆಂಕಿ ಹೊತ್ತಿಕೊಂಡಿರಬಹುದು. ಕಾರಿನೊಳಗೆ ಇದ್ದ ಗಾಳಿಯ ಕಾರಣಕ್ಕೆ ತುಸು ದೂರು ಕಾರು ಮುಂದಕ್ಕೆ ಹೋಗಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ

News Editor

Learn More →

Leave a Reply

Your email address will not be published. Required fields are marked *