
ಉಡುಪಿ : ಜ್ಯೋತಿಷ್ಯ, ವೇದ-ವೇದಾಂತ ಶಾಸ್ತ್ರಗಳಲ್ಲಿ ಪಾರಂಗತರಾಗಿದ್ದ ಮುಂಬಯಿ ಅದಮಾರು ಮಠದ ಶಾಖೆಯ ವ್ಯವಸ್ಥಾಪಕರಾಗಿ ಅನೇಕ ವರ್ಷ ಸೇವೆ ಸಲ್ಲಿಸಿದ್ದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಐದನೇ ಪರ್ಯಾಯ ಅವಧಿಯಲ್ಲಿ ಶ್ರೀಕೃಷ್ಣ ಮಠದ ಸಹ ದಿವಾನರಾಗಿಯೂ ಸೇವೆ ಸಲ್ಲಿಸಿದ್ದ ಪೇಜಾವರಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರ ವಿದ್ವಾನ್ ಅಂಗಡಿಮಾರು ರಾಮಚಂದ್ರ ಭಟ್(72) ನಿಧನರಾಗಿದ್ದಾರೆ.
ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಇಂದು ತಾವು ವಾಸ್ತವ್ಯವಿದ್ದ ಉಡುಪಿ ಪೇಜಾವರ ಮಠದ ಅತಿಥಿಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಓರ್ವ ಪುತ್ರ, ಸಹೋದರ, ಸಹೋದರಿಯರು ಹಾಗೂ ಅಪಾರ ಶಿಷ್ಯರ ಬಳಗವನ್ನು ಅಗಲಿದ್ದಾರೆ.
ದ್ವಾನ್ ರಾಮಚಂದ್ರ ಭಟ್ಟರ ನಿಧನಕ್ಕೆ ಪಲಿಮಾರು ಶ್ರೀ ವಿದ್ಯಾಧೀಶತೀರ್ಥರು, ಪೇಜಾವರ ವಿಶ್ವಪ್ರಸನ್ನ ತೀರ್ಥರು ಸೇರಿದಂತೆ ಸ್ವಾಮೀಜಿಗಳು, ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ವಿದ್ವಾನ್ ರಾಮಚಂದ್ರ ಭಟ್ಟರ ಅಪೇಕ್ಷೆಯಂತೆಯೇ ಪಾರ್ಥಿವ ಶರೀರವನ್ನು ಮಣಿಪಾಲದ ಕೆಎಂಪಿ ಕಾಲೇಜಿನ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೀಡಲಾಗಿದೆ.


