
ಲೋಕಸಭೆಗೆ ಚುನಾವಣೆ ಘೋಷಣೆಯಾಗಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಪದ್ಮರಾಜ್ ರಾಮಯ್ಯ ಕೈ ಅಭ್ಯರ್ಥಿಯಾಗಿ ಬಿರುಸಿನ ಪ್ರಚಾರ ನಡೆಸುತ್ತಿದ್ದರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ನಿರುತ್ಸಾಹ ಮಾತ್ರ ಎದ್ದು ಕಾಣುತ್ತಿದೆ.
ಕಾಂಗ್ರೆಸ್ ಸರ್ಕಾರ ರಚನೆಯಲ್ಲಿ ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದ ಬಹುಪಾಲು ಮತಗಳು ಪಕ್ಷಕ್ಕೆ ಬಿದ್ದಿದ್ದರೂ ಆ ನಂತರ ನಡೆದ ನಿಗಮ, ಮಂಡಳಿ ಹಾಗೂ ಇತರೆ ನೇಮಕಾತಿಗಳಲ್ಲಿ ಈ ಸಮುದಾಯದ ಮುಖಂಡರನ್ನು ಕಡೆಗಣಿಸಲಾಗಿದೆ ಎನ್ನುವ ಆರೋಪಗಳನ್ನು ಆ ಪಕ್ಷದ ಮುಖಂಡರೇ ಮಾಡುತ್ತಿದ್ದಾರೆ.
ಕಡಬ ಕಾಂಗ್ರೆಸ್ ಸಭೆಯಲ್ಲಿ ಅಸಮಾಧಾನ ಭುಗಿಲೆದ್ದ ರೀತಿಯಲ್ಲಿ ಪದ್ಮರಾಜ್ ರಾಮಯ್ಯ ಹಾಗೂ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ ಭಾಗವಹಿಸಿದ್ದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲೂ ಅಲ್ಪ ಸಂಖ್ಯಾತ ಮುಖಂಡರು ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಹರೀಶ್ ಕುಮಾರ್ ಭಾಷಣಕ್ಕೆ ಅಡ್ಡಿ ಪಡಿಸಿದ್ದ ಘಟನೆ ನಡೆದಿತ್ತು.
ಇತ್ತೀಚಿಗೆ ಸರ್ಕಾರದಿಂದ ನೇಮಕಗೊಂಡ ವಿವಿಧ ಇಲಾಖೆ, ನಿಗಮಗಳ ಪದಾಧಿಕಾರಿಗಳ ಪಟ್ಟಿಯಲ್ಲಿ ಕಳೆದ ವಿಧಾನ ಸಭಾ ಚುನಾವಣೆಗೆ ಸಕ್ರಿಯವಾಗಿ ದುಡಿದ ಹಲವರನ್ನು ಕಡೆಗಣಿಸಿದ ಆರೋಪಗಳಿದ್ದು, ಇತರ ಪಕ್ಷಗಳಿಂದ ಕರೆತಂದವರನ್ನೂ ಆ ನಂತರ ಸಂಪೂರ್ಣ ನಿರ್ಲಕ್ಷಿಸಿದ್ದು ಅವರೆಲ್ಲಾ ಈ ಚುನಾವಣೆಯಲ್ಲಿ ತಟಸ್ಥ ನಿಲುವು ಹೊಂದಲು ಕಾರಣವಾಗಿದೆ ಎನ್ನಲಾಗಿದೆ. ಹೀಗೆ ಇದು ಮುಂದುವರಿದರೆ ಕಳೆದ ಬಾರಿ ಜಿಲ್ಲೆಯ ಉಳ್ಳಾಲ ಕ್ಷೇತ್ರದಲ್ಲಿ ಮಾತ್ರ ಗೆದ್ದಿದ್ದ ಕೈ ಪಕ್ಷ ಈ ಬಾರಿ ಇಲ್ಲೂ ಮುನ್ನಡೆ ಸಾಧಿಸುವುದು ಅನುಮಾನ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.


