
ಹೊನ್ನಾವರ : ಸಮುದ್ರದ ಅಂಚಿನಲ್ಲಿ ಸಿಲಿಕಾನ್ ಸ್ಯಾಂಡ್ / ಸಮುದ್ರದ ಅಂಚಿನ ಮರಳು ಸಾಗಾಟ ನಡೆಸುವಾಗ ಸ್ಥಳೀಯರ ವಿರೋಧ ವ್ಯಕ್ತಪಡಿಸಿ, ವಾಹನ ತಡೆದು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ರಾತ್ರಿ ತಾಲೂಕಿನ ಹಳದಿಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಗೋಳಿಬೆಟ್ಟೆಯಲ್ಲಿ ನಡೆದಿದೆ.
ಸಮುದ್ರದ ಅಂಚಿನಲ್ಲಿರುವ ಮರಳನ್ನು ಸಾಗಾಟ ಮಾಡಲು, ಐದು ಟಿಪ್ಪರ ವಾಹನ, ಒಂದು ಹಿಟಾಚಿ ಸಮೇತ ದೊಡ್ಡ ಮಟ್ಟದಲ್ಲಿ ಮರಳು ಸಾಗಾಟ ಮಾಡಲು ಸಂಬಂಧ ಪಟ್ಟವರು ಆಗಮಿಸಿ ಮರಳು ತುಂಬಿ ಸಾಗಾಟ ಮಾಡುವ ಪ್ರಯತ್ನದಲ್ಲಿದ್ದಾಗ ಸ್ಥಳೀಯ ಸಾರ್ವಜನಿಕರು ದಿಢೀರ್ ಪ್ರತಿಭಟನೆ ಮಾಡಿ ವಾಹನದ ಟೈಯರ್ ನ ಗಾಳಿ ತೆಗೆದು, ವಾಹನ ತಡೆದು ಮರಳು ಸಾಗಾಟಕ್ಕೆ ತಡೆ ಒಡ್ಡಿದ್ದಾರೆ. ಸಾರ್ವಜನಿಕರ ಬೃಹತ್ ಪ್ರತಿಭಟನೆಗೆ ಮರಳು ಸಾಗಾಟಕ್ಕೆ ಬಂದವರು ಸ್ಥಳದಿಂದ ಪಲಾಯನಗೊಂಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.


