
ದಂಪತಿಗಳ ನಡುವೆ ಅಕ್ರಮ ಸಂಬಂಧದ ಬಗ್ಗೆ ಆರೋಪಗಳು ನಡೆದು ಪತ್ನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಮೂಡುಬಿದಿರೆಯಲ್ಲಿ ಲಕ್ಷ್ಮಿ ಅಯ್ಯಂಗಾರ್ ಬೇಕರಿ ನಡೆಸುತ್ತಿದ್ದ ನಿಂಗರಾಜು ಬಂದಿತ ಆರೋಪಿ, ಆತನ ಪತ್ನಿ ಪ್ರತಿಮಾ ಆತ್ಮಹತ್ಯೆ ಮಾಡಿಕೊಂಡವರು. ದಂಪತಿಗಳಿಗೆ 12 ವರ್ಷಗಳ ಹಿಂದೆ ಮದುವೆಯಾಗಿದ್ದು, ಅಯ್ಯಂಗಾರ್ ಬೇಕರಿ ನಡೆಸುತ್ತಾ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಗಂಡನ ಆರೋಪ ಮತ್ತು ತಿರಸ್ಕಾರದ ಮಾತುಗಳಿಂದ ಮನನೊಂದ ಪ್ರತಿಮಾ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


