
ಬಸ್ ಮಾಲಕನೇ ಗ್ಯಾರೇಜ್ ಒಂದರಲ್ಲಿ ಬಸ್ ನ ಅಡಿಗೆ ಬಿದ್ದು ಮೃತಪಟ್ಟ ಘಟನೆ ಮಣಿಪಾಲದ ಬಡಗ ಬೆಟ್ಟುವಿನಲ್ಲಿ ಸಂಭವಿಸಿದೆ.
ಅವಘಡದಲ್ಲಿ ಮೃತಪಟ್ಟವರನ್ನು ಉಡುಪಿ ಮಾಂಡವಿ ಬಸ್ಸಿನ ಮಾಲಕ ದಯಾನಂದ ಶೆಟ್ಟಿ ಎಂದು ತಿಳಿದುಬಂದಿದೆ.
ಇವರು ತಮ್ಮ ಬಸ್ಸನ್ನು 80 ಬಡಗ ಬೆಟ್ಟು ಬಳಿಯ ಗ್ಯಾರೇಜಿನಲ್ಲಿ ರಿಪೇರಿಗೆ ನೀಡಿದ್ದರು. ಇದನ್ನು ನೋಡಲು ಬಂದಿದ್ದ ಸಂದರ್ಭದಲ್ಲಿ ಮೆಕ್ಯಾನಿಕ್ ಬಸ್ ಅನ್ನು ಒಮ್ಮಿಂದೊಮ್ಮೆಲೆ ಚಲಾಯಿಸಿದ್ದರು. ಆಗ ಬಸ್ಸಿನ ಎದುರು ಇದ್ದ ದಯಾನಂದ ಅವರು ಬಸ್ ನ ಎದುರಿನ ಚಕ್ರಕ್ಕೆ ಸಿಲುಕಿದ್ದರು ಎನ್ನಲಾಗಿದೆ.
ಅವಘಡದಲ್ಲಿ ದಯಾನಂದ ಗಂಭೀರ ಗಾಯಗೊಂಡಿದ್ದು ಅವರನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.


