
ಮಂಗಳೂರು ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಪಿ. ಎಲ್ ಧರ್ಮ ಅವರನ್ನು ನೇಮಕ ಮಾಡಲಾಗಿದೆ.
ಪ್ರೊ. ಮುಜಾಫರ್ ಹೆಸರನ್ನು ಸರಕಾರ ಶಿಫಾರಸ್ಸು ಮಾಡಿತ್ತು. ಆದರೆ ರಾಜ್ಯಪಾಲರು ಅದಕ್ಕೆ ಅಂಕಿತವನ್ನು ಹಾಕಿರಲಿಲ್ಲ. ಏಳು ತಿಂಗಳಿನಿಂದ ಪ್ರೊ. ಜಯರಾಜ್ ಅಮೀನ್ ನಿವೃತ್ತಿ ಪಡೆದಿದ್ದರು ಹೀಗಾಗಿ ಕುಲಪತಿ ಹುದ್ದೆಗೆ ಪ್ರೊ. ಧರ್ಮ ಅವರು ತೀವ್ರ ಲಾಭಿ ನಡೆಸುತ್ತಿದ್ದರು. ಇದೀಗ ತರಾತುರಿಯಲ್ಲಿ ಪ್ರೊ. ಧರ್ಮ ಅವರನ್ನು ನೇಮಕ ಮಾಡಲಾಗಿದೆ.
ರಾಜ್ಯ ಸರಕಾರದಿಂದ ಹಲವು ದಿನಗಳ ಹಿಂದೆಯೇ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ರಾಜ್ಯಪಾಲ ಥಾವರ್ ಗೆಹ್ಲೋತ್ ಅವರು ಪರಿಶೀಲನೆ ನಡೆಸಿ ಅಂತಿಮ ಮುದ್ರೆ ಒತ್ತಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆದೇಶವಾದ ಕೂಡಲೇ ಅಧಿಕಾರ ಸ್ವೀಕರಿಸಿದ್ದಾರೆ.
ಎರಡನೇ ಬಾರಿಗೆ ಕರಾವಳಿಗೆ ಅವಕಾಶ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗುವ ಮೊದಲ ಅವಕಾಶ ಪ್ರೊ. ಸುಬ್ರಹ್ಮಣ್ಯ ಎಡಿಪಡಿತ್ತಾಯರಿಗೆ ಲಭಿಸಿತ್ತು. ಈಗ ಎರಡನೇ ಬಾರಿಗೆ ಕರಾವಳಿಯವರೇ ಆಗಿರುವ ಪ್ರೊ. ಪಿ. ಎಲ್. ಧರ್ಮ ಅವರಿಗೆ ಲಭಿಸಿದೆ. ಎಂಟು ಅವಧಿಗಳಲ್ಲಿ ಕರಾವಳಿ ಬಿಟ್ಟು ಹೊರ ಜಿಲ್ಲೆಯವರು ಕುಲಪತಿಗಳಾಗಿ ಆಡಳಿತ ನಡೆಸಿದ್ದರು. ಪಿ ಎಲ್ ಧರ್ಮ ಅವರು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ, ಕುಲ ಸಚಿವರಾಗಿ ಪರೀಕ್ಷಾಂಗ ಕುಲ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.


