
ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮುಕ್ಕ ಎಂಬಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕುವಿನಿಂದ ಇರಿದಿರುವ ಘಟನೆ ರವಿವಾರ ಸಂಜೆ ನಡೆದಿದೆ.
ಸದ್ರಿ ಘಟನೆಯಿಂದ ಮುಕ್ಕ ನಿವಾಸಿ ಹರಿಲಾಲ್ ಎಂಬವರು ಗಾಯಗೊಂಡಿದ್ದು, ಅದೇ ಪರಿಸರದ ಆರೋಪಿ ನವೀನ್ ಆಚಾರಿ ಎಂಬಾತನನ್ನು ಪೊಲೀಸರು ಇದೀಗ ವಶಕ್ಕೆ ಪಡೆದಿದ್ದಾರೆ
ಇಬ್ಬರಿಗೆ ಸುಮಾರು 20 ವರ್ಷಗಳ ಪರಿಚಯವಿದ್ದು, ಇಂದು ಮುಕ್ಕದ ಬಾರೊಂದರಲ್ಲಿ ಮದ್ಯ ಕುಡಿದಿದ್ದಾರೆ ಎನ್ನಲಾಗಿದ್ದು, ಬಳಿಕ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತು ಆರಂಭವಾಗಿತ್ತು. ಮಾತಿಗೆ ಮಾತು ಬೆಳೆದು ನವೀನ್ ಆಚಾರಿ ತನ್ನ ಬಳಿಯಿದ್ದ ಚಾಕುವಿನಿಂದ ಹರಿಲಾಲ್ ಅವರಿಗೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಘಟನೆಯಿಂದ ಹರಿಲಾಲ್ ಅವರ ಕಾಲು ಮತ್ತು ಕೈಗೆ ಗಾಯಗಳಾಗಿದ್ದು, ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸುರತ್ಕಲ್ ಪೊಲೀಸರು ಆರೋಪಿ ನವೀನ್ ನನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.


