
ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ತೆಂಕ ಎರ್ಮಾಳಿನ ಹೊಟೇಲ್ ಅಪೂರ್ವ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಾತ್ರಿ ಮೋಟಾರು ಬೈಕೊಂದು ಢಿಕ್ಕಿಯಾಗಿ ಹೆದ್ದಾರಿಯನ್ನು ದಾಟುತ್ತಿದ್ದ ಬಡಾ ಎರ್ಮಾಳಿನ ಮಹಾಬಲ (64) ಅವರು ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ರಾ. ಹೆ. 66ರ ಏಕಮುಖ ಸಂಚಾರ ರಸ್ತೆಯಲ್ಲಿ ಮೃತ ಮಹಾಬಲರಿಗೆ ಮೋಟಾರು ಸೈಕಲ್ ಢಿಕ್ಕಿ ಹೊಡೆಯಿತು ಎನ್ನಲಾಗಿದೆ.
ಬೈಕ್ ಸವಾರ ಹಾಗೂ ರಸ್ತೆ ದಾಟುತ್ತಿದ್ದ ವ್ಯಕ್ತಿ ಇಬ್ಬರೂ ರಸ್ತೆಗೆ ಬಿದ್ದರು. ತಲೆಗೆ ಗಂಭೀರ ಗಾಯಗೊಂಡು ಮಾತನಾಡಲಾಗದ ಸ್ಥಿತಿಯಲ್ಲಿದ್ದ ಮಹಾಬಲ ಹಾಗೂ ಬೈಕ್ ಸವಾರ ವಿನೋದ್ ಅವರನ್ನು ಆ್ಯಂಬುಲೆನ್ಸ್ ಮೂಲಕ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪಲ್ಸರ್ ಬೈಕ್ನ ಸವಾರ ವಿನೋದ್ ಅತೀವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಕ್ಕೆ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣವಾಗಿದ್ದು, ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಕೃಷಿ ಕಾರ್ಮಿಕರಾಗಿದ್ದ ಮಹಾಬಲ ಅವರು ಕೂಲಿ ಕೆಲಸದಿಂದ ತಮ್ಮ ಕುಟುಂಬ ನಿರ್ವಹಣೆಯನ್ನು ಮಾಡುತ್ತಿದ್ದರು.ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.


