ಅಕ್ರಮವಾಗಿ ಚಿನ್ನ ಕಳ್ಳ ಸಾಗಾಟದಲ್ಲಿ ದೇಶದಲ್ಲೇ ಕೇರಳ ಅಗ್ರಸ್ಥಾನ

ಕೇರಳ ಚಿನ್ನ ಕಳ್ಳ ಸಾಗಾಟದಲ್ಲಿ ನಂ. 1 ಸ್ಥಾನ. ವಿದೇಶದಿಂದ ಅಕ್ರಮವಾಗಿ ಚಿನ್ನ ಕಳ್ಳ ಸಾಗಾಟ ನಡೆಯುವ ರಾಜ್ಯಗಳ ಪೈಕಿ ಕೇರಳ ಇಡೀ ದೇಶದಲ್ಲೇ ಕೇರಳ ಅಗ್ರಸ್ಥಾನದಲ್ಲಿದೆ. ಕಂದಾಯ ಗುಪ್ತಚರ ವಿಭಾಗ (ರೆವೆನ್ಯೂ ಇಂಟಲಿಜೆನ್ಸ್‌) ತಯಾರಿಸಿ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಇದನ್ನು ಉಲ್ಲೇಖೀಸಲಾಗಿದೆ.

ಈ ವರದಿ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಾಗಿ ವಿದೇಶದಿಂದ ಕೇರಳಕ್ಕೆ 2291.51 ಕಿಲೋ ಚಿನ್ನ ಕಳ್ಳ ಸಾಗಾಟದ ಮೂಲಕ ಹರಿದು ಬಂದಿದೆ. ಈ ಸಂಬಂಧ ಒಟ್ಟು 3,173 ಪ್ರಕರಣ ದಾಖಲಿಸಲಾಗಿದೆ. ವಿಮಾನ ಮಾರ್ಗ ಹಾಗು ಸಮುದ್ರ ಮಾರ್ಗವಾಗಿ ದೇಶಕ್ಕೆ ಚಿನ್ನ ಕಳ್ಳ ಸಾಗಾಟವಾಗುತ್ತಿದೆ. ಕೇರಳದ ಬಳಿಕ ಇದೇ ಕಾಲಾವಧಿಯಲ್ಲಿ 2,959 ಪ್ರಕರಣಗಳು ದಾಖಲುಗೊಂಡಿರುವ ತಮಿಳುನಾಡು ದ್ವಿತೀಯ ಸ್ಥಾನದಲ್ಲಿದೆ. 2,528 ಪ್ರಕರಣಗಳು ದಾಖಲುಗೊಂಡಿರುವ ಮಹಾರಾಷ್ಟ್ರ ತೃತೀಯ ಸ್ಥಾನದಲ್ಲಿದೆ.

ತಿರುವನಂತಪುರ, ಕೊಚ್ಚಿ ಹಾಗೂ ಕೋಯಿಕ್ಕೋಡ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೂಲಕವೇ ವಿದೇಶದಿಂದ ಅತೀ ಹೆಚ್ಚು ಚಿನ್ನ ಕಳ್ಳಸಾಗಾಟ ನಡೆಯುತ್ತಿದೆ. ಈಗ ಅದು ಕಣ್ಣೂರು ಅಂತಾರಾಷ್ಟ್ರೀಯ ನಿಲ್ದಾಣಕ್ಕೂ ವಿಸ್ತರಿಸಿದೆ. ಕೇರಳಕ್ಕೆ ಕೊಲ್ಲಿ ರಾಷ್ಟ್ರಗಳಿಂದಲೇ ಅಧಿಕ ಪ್ರಮಾಣದಲ್ಲಿ ಚಿನ್ನ ಕಳ್ಳ ಸಾಗಾಟವಾಗುತ್ತಿದೆ. 2020ರಲ್ಲಿ ವಿದೇಶದಿಂದ ಕೇರಳಕ್ಕೆ 406.39 ಕಿಲೋ ಚಿನ್ನ ಕಳ್ಳ ಸಾಗಾಟವಾಗಿದೆ. ಈ ಸಂಬಂಧ 672 ಪ್ರಕರಣಗಳನ್ನು ದಾಖಲಿಸಲಾಗಿದೆ.

2021ರಲ್ಲಿ 586.95 ಕಿಲೋ ಚಿನ್ನ ಕಳ್ಳಸಾಗಾಟವಾಗಿದ್ದು, 738 ಪ್ರಕರಣಗಳು ದಾಖಲಾಗಿವೆ. 2022ರಲ್ಲಿ 755.81 ಕಿಲೋ ಚಿನ್ನ ಕಳ್ಳಸಾಗಾಟವಾಗಿದ್ದು, 1,035 ಪ್ರಕರಣಗಳು ದಾಖಲಾಗಿವೆ. 2023 ಅಕ್ಟೋಬರ್‌ ತನಕ 542.36 ಕಿಲೋ ಚಿನ್ನ ಕೇರಳಕ್ಕೆ ಹರಿದು ಬಂದಿದೆ. 728 ಪ್ರಕರಣಗಳು ದಾಖಲಾಗಿವೆ.

News Editor

Learn More →