ಬೆಂಗಳೂರಿನ 7 ಶಾಲೆಗಳಿಗೆ ಬಾಂಬ್ ಸಂದೇಶ ಕಳುಹಿಸಿದ್ದ ಯುವತಿ ಬಂಧನ: ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಳ್ಳಲು ಕೃತ್ಯ

ಬೆಂಗಳೂರು, ನ. 6:
ನಗರದ ಶಾಲೆಗಳಿಗೆ ಸರಣಿ ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಹಮದಾಬಾದ್‌ನ ಕೇಂದ್ರ ಕಾರಾಗೃಹದಲ್ಲಿದ್ದ ತಮಿಳುನಾಡು ಮೂಲದ ರೆನೆ ಜೊಶಿಲ್ದಾ (30) ಎಂಬ ಯುವತಿಯನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

40ಕ್ಕೂ ಹೆಚ್ಚು ಪ್ರಕರಣಗಳು ದಾಖಲು
ಬಂಧಿತೆಯ ವಿರುದ್ಧ ಬೆಂಗಳೂರು ನಗರದಲ್ಲಿ ಏಳು ಹಾಗೂ ಗುಜರಾತ್, ತಮಿಳುನಾಡು, ಹರಿಯಾಣ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಒಟ್ಟು 40ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಳೆದ ಕೆಲವು ತಿಂಗಳುಗಳ ಹಿಂದೆ ಅಹಮದಾಬಾದ್ ಪೊಲೀಸರು ಹುಸಿ ಬಾಂಬ್ ಬೆದರಿಕೆ ಪ್ರಕರಣದಲ್ಲಿ ಬಂಧಿಸಿದ್ದರು. ನಂತರ, ಬೆಂಗಳೂರಿನ ಸೈಬರ್ ಕ್ರೈಂ ಠಾಣೆ ನಡೆಸಿದ ತಾಂತ್ರಿಕ ತನಿಖೆಯಲ್ಲಿ ಆಕೆಯ ಭಾಗವಹಿಸುವಿಕೆ ಪತ್ತೆಯಾಗಿತ್ತು.

ತಾಂತ್ರಿಕ ಜ್ಞಾನ ಬಳಸಿ ಕೃತ್ಯ
ರೆನೆ ಜೊಶಿಲ್ದಾ ಬಿಇ ಎಲೆಕ್ಟ್ರಿಕಲ್ ಪದವಿ ಪಡೆದ ರೋಬೋಟಿಕ್ ಇಂಜಿನಿಯರ್ ಆಗಿದ್ದು, ತಾಂತ್ರಿಕ ಜ್ಞಾನವನ್ನು ದುರುಪಯೋಗಪಡಿಸಿಕೊಂಡು ವಿಪಿಎನ್ ಮತ್ತು ವರ್ಚುವಲ್ ನಂಬರ್‌ಗಳ ಮೂಲಕ 6–7 ವಾಟ್ಸಪ್ ಖಾತೆಗಳನ್ನು ನಿರ್ವಹಿಸುತ್ತಿದ್ದಳು. ಈ ಮೂಲಕ ದೇಶದ 11 ರಾಜ್ಯಗಳ ಶಾಲಾ-ಕಾಲೇಜುಗಳಿಗೆ ಹುಸಿ ಬಾಂಬ್ ಸಂದೇಶಗಳನ್ನು ಕಳುಹಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಸೇಡು ತೀರಿಸಿಕೊಳ್ಳಲು ಕೃತ್ಯ
ಯುವತಿಗೆ ಬೆಂಗಳೂರಿನ ಪ್ರಭಾಕರ್ ಎಂಬ ಯುವಕನೊಂದಿಗೆ ಪ್ರೇಮ ಸಂಬಂಧ ಇತ್ತು. ಆದರೆ ಆತ ಆಕೆಯ ಪ್ರೀತಿಯನ್ನು ನಿರಾಕರಿಸಿ, ಈ ವರ್ಷದ ಫೆಬ್ರವರಿಯಲ್ಲಿ ಮತ್ತೊಬ್ಬರೊಂದಿಗೆ ವಿವಾಹವಾಗಿದ್ದ. ಇದರಿಂದ ಅಸಮಾಧಾನಗೊಂಡ ಯುವತಿ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಳ್ಳಲು ಅವನ ಹೆಸರಿನಲ್ಲಿ ಇಮೇಲ್ ಖಾತೆ ತೆರೆದು ದೇಶದ ವಿವಿಧ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾಳೆ. ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನ ಹಾಗೂ ಏರ್ ಇಂಡಿಯಾ ವಿಮಾನ ದುರಂತ ಉಲ್ಲೇಖಿಸುತ್ತಾ ಬೆದರಿಕೆ ಸಂದೇಶ ಕಳುಹಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ತನಿಖೆ ಮುಂದುವರಿಕೆ
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಉತ್ತರ ವಿಭಾಗದ ಡಿಸಿಪಿ ನೇಮಗೌಡ ಹಾಗೂ ಎಸಿಪಿ ಪವನ್ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿತೆಯನ್ನು ಪತ್ತೆ ಹಚ್ಚಿದೆ. ಸದ್ಯ ಬಂಧಿತೆಯ ವಿರುದ್ಧ ದಾಖಲಾದ 7 ಪ್ರಕರಣಗಳ ತನಿಖೆ ಮುಂದುವರಿದಿದೆ.

Star Of Kudla

Learn More →

Leave a Reply

Your email address will not be published. Required fields are marked *