ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರಾಯ್ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರಾಯ್ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಇಂದು ನಿಧನ ಹೊಂದಿದ್ದಾರೆ. ಹಲವು ಸೂಪರ್‌ಹಿಟ್‌ ಚಿತ್ರಗಳಲ್ಲಿ ಶಕ್ತಿಯುತ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಈ ಪ್ರತಿಭಾವಂತ ಕಲಾವಿದ, ಕಳೆದ ಕೆಲವು ವರ್ಷಗಳಿಂದ ಥೈರಾಯ್ಡ್ ಕ್ಯಾನ್ಸರ್‌ನೊಂದಿಗೆ ಹೋರಾಟ ನಡೆಸುತ್ತಿದ್ದರು.

ಹರೀಶ್ ರಾಯ್ ಅವರ ಆರೋಗ್ಯ ಕಳೆದ ಕೆಲವು ತಿಂಗಳುಗಳಿಂದ ಹದಗೆಡುತ್ತಿತ್ತು. ದೇಹ ಕೃಷಗೊಳ್ಳುವುದರೊಂದಿಗೆ ಹೊಟ್ಟೆ ಉಬ್ಬರಗೊಂಡು ಅವರ ಶರೀರದಲ್ಲಿ ದೊಡ್ಡ ಬದಲಾವಣೆ ಕಂಡುಬಂದಿತ್ತು. ತಮ್ಮ ಚಿಕಿತ್ಸೆಗೆ ಸಹಾಯ ಕೋರಿ ಅವರು ಸಾಮಾಜಿಕ ಮಾಧ್ಯಮದ ಮೂಲಕ ಮನವಿ ಮಾಡಿದ್ದರು. ಈ ವೇಳೆ ನಟ ಯಶ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್, ದರ್ಶನ್ ಅಭಿಮಾನಿ ಬಳಗ ಹಾಗೂ ಹಲವು ಕಲಾವಿದರು ಆರ್ಥಿಕ ಸಹಾಯದ ಕೈ ಚಾಚಿದ್ದರು. ತಮ್ಮ ಕೊನೆಯ ಕ್ಷಣಗಳವರೆಗೂ ಧೈರ್ಯ ಕಳೆದುಕೊಳ್ಳದ ಅವರು, ಎಲ್ಲರಿಗೂ ಹೋರಾಟದ ಪ್ರೇರಣೆಯಾದರು.

ಕರಾವಳಿ ಮೂಲದ ಹರೀಶ್ ರಾಯ್ ಅವರು 1990ರ ದಶಕದಲ್ಲಿ ಕನ್ನಡ ಚಿತ್ರರಂಗದ ಪ್ರಮುಖ ಖಳನಟರಾಗಿ ಗುರುತಿಸಿಕೊಂಡಿದ್ದರು. ‘ಓಂ’, ‘ನಲ್ಲ’, ‘ಜೋಡಿ ಹಕ್ಕಿ’, ‘ತಾಯವ್ವ’, ‘ಭೂಗತ’, ‘ಜಾಫರ್ ಅಲಿಯಾಸ್ ಮುರ್ಗಿ ಜಾಫರ್’, ‘ರಾಜ್ ಬಹದ್ದೂರ್’, ‘ಸಂಜು ವೆಡ್ಸ್ ಗೀತಾ’, ಹಾಗು ಬ್ಲಾಕ್‌ಬಸ್ಟರ್‌ಗಳು ‘ಕೆಜಿಎಫ್ ಚಾಪ್ಟರ್ 1’ ಮತ್ತು ‘ಕೆಜಿಎಫ್ ಚಾಪ್ಟರ್ 2’ ಸೇರಿದಂತೆ ಅನೇಕ ಚಿತ್ರಗಳಲ್ಲಿ ತಮ್ಮ ವಿಶಿಷ್ಟ ಅಭಿನಯದಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು.

ಅವರು ತಮಿಳು ಚಿತ್ರರಂಗದಲ್ಲಿಯೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಕೆಲವು ವರ್ಷಗಳ ಹಿಂದೆ ಒಂದು ಪ್ರಕರಣದ ಹಿನ್ನೆಲೆಯಲ್ಲಿ ಅವರು ಜೈಲು ಪಾಲಾಗಿದ್ದರೂ, ಅದನ್ನು ತಮ್ಮ ಜೀವನದ ಪಾಠವಾಗಿ ಸ್ವೀಕರಿಸಿ ಧೈರ್ಯದಿಂದ ಎದುರಿಸಿದ್ದರು.

ಹರೀಶ್ ರಾಯ್ ಅವರು ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಅವರ ನಿಧನದಿಂದ ಕನ್ನಡ ಚಿತ್ರರಂಗವು ಒಂದು ನಿಸ್ಸೀಮ ಪ್ರತಿಭೆಯನ್ನು ಕಳೆದುಕೊಂಡಿದೆ. ಸ್ಯಾಂಡಲ್‌ವುಡ್‌ನ ಅತ್ಯಂತ ಜನಪ್ರಿಯ “ಖಳನಟ” ಎಂದೇ ಕರೆಯಲ್ಪಟ್ಟ ಈ ಸರಳ ಹಾಗೂ ಧೈರ್ಯಶಾಲಿ ಕಲಾವಿದನ ನೆನಪು ಅಭಿಮಾನಿಗಳ ಮನಗಳಲ್ಲಿ ಶಾಶ್ವತವಾಗಿ ಉಳಿಯಲಿದೆ.

Star Of Kudla

Learn More →

Leave a Reply

Your email address will not be published. Required fields are marked *