
ವಿಜಯನಗರ:
ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರ ಕಚೇರಿಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಹರಪನಹಳ್ಳಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಮಾಹಿತಿ ನೀಡಿದರು.
ಜುಲೈ 17ರಂದು ಶಾಸಕರ ಕಚೇರಿಯಲ್ಲಿ ನಡೆದ ಈ ಕಳ್ಳತನ ಪ್ರಕರಣದಲ್ಲಿ ಸುಮಾರು ₹11.65 ಲಕ್ಷ ಮೌಲ್ಯದ ಆಭರಣ ಕಳವುಗೊಂಡಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮಧ್ಯಪ್ರದೇಶಕ್ಕೆ ಪಯಣ ಮಾಡಿ, ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಹೊಸಪೇಟೆಯ ಎಸ್‌ಪಿ ಕಚೇರಿಯಲ್ಲಿ ಬುಧವಾರ ವಶಪಡಿಸಿಕೊಂಡ ಆಭರಣಗಳನ್ನು ಪ್ರದರ್ಶಿಸಿ ಸುದ್ದಿಗೋಷ್ಠಿ ನಡೆಸಿದ ಎಸ್‌ಪಿ ಜಾಹ್ನವಿ ಹೇಳಿದರು, “ಯಾವುದೇ ಪ್ರಕರಣ ದಾಖಲಾಗುತ್ತಿದ್ದಂತೆ ಗರಿಷ್ಠ 15 ರಿಂದ 20 ದಿನಗಳಲ್ಲಿ ನಾವು ಪತ್ತೆ ಮಾಡುತ್ತೇವೆ. ಅದು ಮಿಸ್ಸಿಂಗ್ ಕೇಸ್ ಆಗಿರಲಿ ಅಥವಾ ಕಳ್ಳತನ ಪ್ರಕರಣವಾಗಿರಲಿ, ಎಲ್ಲವನ್ನೂ ಗಂಭೀರವಾಗಿ ಪರಿಗಣಿಸುತ್ತೇವೆ,” ಎಂದರು.
ಅವರು ಮುಂದುವರಿದು, “ಆ ದಿನ ಶಾಸಕರ ಕಚೇರಿಯಲ್ಲಿ ಸಾಮಾನ್ಯವಾಗಿ ಬೆಲೆಬಾಳುವ ವಸ್ತುಗಳು ಇರಲಿಲ್ಲ. ಆದರೆ ತುರ್ತು ಸಂದರ್ಭದಿಂದಾಗಿ ಅವರು ಒಂದು ಕಾರ್ಯಕ್ರಮಕ್ಕೆ ಹೋಗುವ ಮುನ್ನ ಚಿನ್ನಾಭರಣವನ್ನು ಕಚೇರಿಯಲ್ಲೇ ಇಟ್ಟಿದ್ದರು. ಆ ಸಂದರ್ಭದಲ್ಲಿ ಈ ಕಳ್ಳತನ ನಡೆದಿದೆ,” ಎಂದು ವಿವರಿಸಿದರು.
ಬಂಧಿತರಾದವರು ಮಧ್ಯಪ್ರದೇಶದ ಮೂಲದ 26 ವರ್ಷದ ಜೇಲು ಮತ್ತು 23 ವರ್ಷದ ರಾಕೇಶ್ ಪವಾರ್ ಎಂದು ಪೊಲೀಸರು ಗುರುತಿಸಿದ್ದಾರೆ. ಕದ್ದ ಎಲ್ಲಾ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


