ಇಪಿಎಫ್ಒ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಹಣ ದುರ್ಬಳಕೆ ಪ್ರಕರಣ: ಇಬ್ಬರು ಬಂಧನ

ಬೆಂಗಳೂರು: ಇಪಿಎಫ್ಒ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಹಣ ದುರ್ಬಳಕೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕಬ್ಬನ್‌ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಿಇಒ ಗೋಪಿ ಹಾಗೂ ಸಿಬ್ಬಂದಿ ಲಕ್ಷ್ಮಿ ಜಗದೀಶ್ ಅವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ, ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ.

ಪ್ರಕರಣದ ದೂರಿನ ವಿವರ: ಇಪಿಎಫ್‌ಒ ನೌಕರರೇ ಸೇರಿ 61 ವರ್ಷಗಳ ಹಿಂದೆ ಇಪಿಎಫ್ಒ ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ರಚಿಸಿಕೊಂಡಿದ್ದರು. ಇಪಿಎಫ್‌ಒ ನೌಕರರಿಗೆ ಮಾತ್ರವೇ ಸೊಸೈಟಿಯಲ್ಲಿ ಹೂಡಿಕೆಗೆ ಅವಕಾಶ ನೀಡಲಾಗಿತ್ತು. ನೂರಾರು ಜನ ನೌಕರರು ತಮ್ಮ ಉಳಿತಾಯದ ಹಣವನ್ನು ಸೊಸೈಟಿಯಲ್ಲಿ ಹೂಡಿಕೆ ಮಾಡಿದ್ದರು. ಆ ಹಣವನ್ನು ಅವಶ್ಯಕತೆ ಇರುವ ನೌಕರರಿಗೆ ಸಾಲದ ರೂಪದಲ್ಲಿ ನೀಡುತ್ತಿದ್ದ ಸೊಸೈಟಿ, ಹೂಡಿಕೆ ಮಾಡಿದ್ದವರ ಖಾತೆಗಳಿಗೆ ಪ್ರತಿ ತಿಂಗಳು ಬಡ್ಡಿಯ ಹಣವನ್ನೂ ಸಂದಾಯ ಮಾಡುತ್ತಿತ್ತು. ಆದರೆ, 3 ತಿಂಗಳಿನಿಂದ ಬಡ್ಡಿಯ ಹಣ ಖಾತೆಗೆ ಸಂದಾಯವಾಗದಿದ್ದಾಗ ಹೂಡಿಕೆದಾರರು ತೆರಳಿ ಸೊಸೈಟಿಯ ಖಾತೆಯನ್ನು ಪರಿಶೀಲಿಸಿದ್ದರು. ಆಗ ಕೇವಲ 3 ಕೋಟಿ ರೂ. ಮಾತ್ರವೇ ಸಾಲ ನೀಡಲಾಗಿದ್ದು, ಉಳಿದ ಹಣ ಸೊಸೈಟಿಯ ಖಾತೆ ಖಾಲಿಯಾಗಿರುವುದು ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಹೂಡಿಕೆಯ ಹಣವನ್ನು ಸೊಸೈಟಿಯ ಖಾತೆಯಿಂದ ಅನಧಿಕೃತವಾಗಿ ಇತರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ಹೂಡಿಕೆದಾರರು ಕಬ್ಬನ್‌ಪಾರ್ಕ್‌ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *