
ಮುಂಬರುವ ಲೋಕಸಭಾ ಚುನಾವಣೆಗೆ ನಾಲ್ಕು ರಾಜ್ಯಗಳ 43 ಅಭ್ಯರ್ಥಿಗಳ ಹೆಸರಿರುವ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಮಂಗಳವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕಾಂಗ್ರೆಸ್ನ ಮುಂಚೂಣಿ ನಾಯಕರ ಮಕ್ಕಳ ಹೆಸರುಗಳು ಪ್ರಧಾನವಾಗಿ ಕಂಡು ಬಂದಿದೆ. ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರ ಪುತ್ರ ಗೌರವ್ ಗೊಗೊಯ್, ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಗೆಹ್ಲೋಟ್ ಮತ್ತು ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಸೇರಿದಂತೆ ಕಾಂಗ್ರೆಸ್ನ ಹೊಸ ಪೀಳಿಗೆಯ ನಾಯಕರು ಕಾಣಿಸಿಕೊಂಡಿದ್ದಾರೆ. ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ಹಂತದಲ್ಲಿ ಅದನ್ನು ಬಿಡುಗಡೆ ಮಾಡಿಲ್ಲ
ಸೋಮವಾರ ರಾತ್ರಿ ಬೆಂಗಳೂರಿನಲ್ಲಿ ರಾಜ್ಯದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿತ್ತು. ಅದೀಗ ದೆಹಲಿ ತಲುಪಿದೆ. ಹೀಗಾಗಿ ಕರ್ನಾಟಕದ 28 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಮೂರನೇ ಹಂತದಲ್ಲಿ ಬಿಡುಗಡೆಗೊಳ್ಳಬಹುದು. ರಾಜಸ್ಥಾನದ ಜರೋಲ್ನಿಂದ ಸ್ಪರ್ಧಿಸಲಿರುವ ವೈಭವ್ ಗೆಹ್ಲೋಟ್ 2019 ರಲ್ಲಿ ಜೋಧ್ಪುಟ್ ಕ್ಷೇತ್ರದಿಂದ ಗಜೇಂದ್ರ ಸಿಂಗ್ ಶೇಖಾವತ್ ವಿರುದ್ಧ ಸೋತಿದ್ದರು. ಇದಲ್ಲದೆ ರಾಜ್ಯದ ಮಾಜಿ ಪೊಲೀಸ್ ಮುಖ್ಯಸ್ಥ ಹರೀಶ್ ಮೀನಾ ಅವರು ಟೋಂಕ್-ಸವಾಯಿ ಮಾಧೋಪುರದಿಂದ ಸ್ಪರ್ಧಿಸಲಿದ್ದಾರೆ. ಬಿಜೆಪಿಯಿಂದ ಪಕ್ಷಾಂತರಗೊಂಡ ರಾಹುಲ್ ಕಸ್ವಾ ಚುರುವಿನಿಂದ ಮತ್ತು ಬ್ರಿಜೇಂದ್ರ ಓಲಾ ಜುಂಜುನುದಿಂದ ಕಣಕ್ಕೆ ಇಳಿಯುತ್ತಾರೆ.


