
ಲಂಚ ಸ್ವೀಕಾರ ಮಾಡುತ್ತಿದ್ದ ಸರ್ವೆಯರ್ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ. ತಾಲೂಕು ಕಚೇರಿಯ ಭೂಮಾಪನ ಇಲಾಖೆಯ ಸರ್ವೆಯರ್ ಶೀತಲ್ ರಾಜ್ ನಾಲ್ಕು ಸಾವಿರ ರೂ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದು, ಹಣ ಸಮೇತ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನೀರು ಮಾರ್ಗದ 72 ವರ್ಷದ ಅನಾರೋಗ್ಯಕ್ಕೆ ಗುರಿಯಾಗಿದ್ದ ವೃದ್ಧೆ ಒಬ್ಬರು ಸಂಬಂಧಿಯೊಬ್ಬರ ಮೂಲಕ ತತ್ಕಾಲ್ ಪೋಡಿ ಮಾಡಿಕೊಡಲು ಮಂಗಳೂರು ಜಿಲ್ಲಾಧಿಕಾರಿ ಕಚೇರಿಯ ಪಹಣಿ ವಿಭಾಗದಲ್ಲಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ 15,000 ರೂ ಹಣವನ್ನು ಆನ್ಲೈನ್ ಮೂಲಕ ಪಾವತಿ ಮಾಡಿ ರಶೀದಿ ಪಡೆದಿದ್ದರು. ಫೆಬ್ರವರಿ 29 ರಂದು ಮಂಗಳೂರಿನ ಸರ್ವೆ ಇಲಾಖೆಯಲ್ಲಿ ಕೆಲಸ ಮಾಡುವ ಶೀತಲ್ ರಾಜ್ ಎಂಬ ಸರ್ವೆಯರ್ ಜಮೀನಿನ ಸರ್ವೆ ನಡೆಸಿ ಮಹಜರು ಮಾಡಿದ್ದರು. ಬಳಿಕ ಜಮೀನಿನ ನಕ್ಷೆ ನೀಡಲು ಸ್ವಲ್ಪ ಖರ್ಚಿದೆ ಎಂದು ಹೇಳಿದ್ದು 5 ಸಾವಿರ ಕೊಡುವಂತೆ ಬೇಡಿಕೆ ಇರಿಸಿದ್ದರು. ಬಳಿಕ ಕಡಿಮೆ ಮಾಡುವಂತೆ ಹೇಳಿದ್ದಕ್ಕೆ 4000 ಗೆ ಇಳಿಸಿದ್ದರು. ಈ ಬಗ್ಗೆ ನೊಂದ ಅರ್ಜಿದಾರ ಮಂಗಳೂರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಗುರುವಾರ ಮಂಗಳೂರಿನ ಮಿನಿ ವಿಧಾನಸೌಧದಲ್ಲಿ ನಾಲ್ಕು ಸಾವಿರ ಲಂಚದ ಹಣ ಸ್ವೀಕಾರ ಮಾಡುವಾಗಲೇ ಲೋಕಾಯುಕ್ತ ಪೊಲೀಸರು ಆರೋಪಿ ಶೀತಲ್ ರಾಜ್ ನನ್ನು ಬಂಧಿಸಿದ್ದಾರೆ. ಎಸ್ಪಿ ಸೈಮನ್ ನೇತೃತ್ವದಲ್ಲಿ ಡಿ ವೈಎಎಸ್ಪಿ ಚೆಲುವರಾಜು, ಗಾನ ಪಿ ಕುಮಾರ್ ಕಾರ್ಯಾಚರಣೆ ನಡೆಸಿದ್ದರು.


