
ಬೆಂಗಳೂರು : ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಪೊಲೀಸರಿಗೆ ನೆರವು ನೀಡಲು ಖ್ಯಾತ ಕಲಾವಿದ ಹರ್ಷ ಮುಂದಾಗಿದ್ದಾರೆ.ಪ್ರಕರಣದ ಬಾಂಬರ್ ಬಗ್ಗೆ ಮಾಹಿತಿ ನೀಡಿದವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ ನೀವೂ ಬುಧವಾರ 10 ಲಕ್ಷ ರೂ. ನಗದು ಬಹುಮಾನ ಘೋಷಿಸಿದೆ. ಎನ್‌ಐಎ ಬಿಡುಗಡೆ ಮಾಡಿರುವ ಭಾವಚಿತ್ರದಲ್ಲಿ ವ್ಯಕ್ತಿಯ ಅರ್ಧ ಮುಖ ಮಾತ್ರ ಕಂಡಿದೆ.ಇದೀಗ ಆರೋಪಿಯ ರೇಖಾಚಿತ್ರವನ್ನು ಬಿಡಿಸಲಾಗಿದ್ದು, ಈ ಚಹರೆಯನ್ನು ಹೊಂದಿರುವ ವ್ಯಕ್ತಿ ನಿಮಗೆ ಎಲ್ಲಾದರೂ ಪತ್ತೆಯಾದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರನ್ನು ಬೆಚ್ಚಿ ಬೀಳಿಸಿದ ಬಾಂಬ್ ಸ್ಪೋಟದ ಆರೋಪಿ ಇನ್ನೂ ನಮ್ಮ ನಿಮ್ಮ ನಡುವೆಯೇ ಇದ್ದಾನೆ. ಆತನನ್ನು ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಬೇಕಿದೆ. ಘಟನೆ ನಡೆದು ಏಳು ದಿನಗಳೇ ಕಳೆದರೂ ಆರೋಪಿಯನ್ನು ಸೆರೆ ಹಿಡಿಯಲು ಪೊಲೀಸ್ ಇಲಾಖೆ ಮತ್ತು ಎನ್‌ಐಎ ವಿಫಲವಾಗಿದೆ. ಇದಕ್ಕೆ ಮುಖ್ಯ ಕಾರಣ. ಆರೋಪಿ ಟೋಪಿ ಧರಿಸಿದ್ದು, ಮಾಸ್ಕ್ ಹಾಕಿಕೊಂಡಿದ್ದು ಮತ್ತು ಎಲ್ಲೂ ಸಿಸಿಟಿವಿ ಕ್ಯಾಮೆರಾಗಳಿಗೆ ಮುಖ ಕಾಣಿಸದೆ ಇದ್ದದ್ದು. ಅದರ ಜತೆಗೆ ಆತ ಹೋಟೆಲ್‌ಗೆ ಬಂದು ಬಾಂಬಿಟ್ಟು ಹೋದ ಬಳಿಕ ಒಂದು ಗಂಟೆಗಿಂತಲೂ ಹೆಚ್ಚು ಹೊತ್ತು ಸಮಯಾವಕಾಶ ಸಿಕ್ಕಿದ್ದರಿಂದ ಆತ ದೂರ ಹೋಗಿ ತಪ್ಪಿಸಿಕೊಳ್ಳಲು ಅವಕಾಶವಾಗಿದೆ ಎನ್ನಲಾಗಿದೆ.
ಈಗ ಪೊಲೀಸರಿಗೆ ಕಲಾವಿದರು ಆಸರೆಯಾಗಿದ್ದು,ಬಾಂಬ್ ಸ್ಫೋಟಿಸಿದ ಆರೋಪಿಯ ಒಂದು ಭಾಗದ ಮುಖಚರ್ಯೆಯನ್ನು ಆಧರಿಸಿ ಪೂರ್ಣ ಪ್ರಮಾಣದ ಮುಖದ ರೇಖಾಚಿತ್ರವನ್ನು ಬರೆದು ಪೊಲೀಸರಿಗೆ ನೀಡಿದ್ದಾರೆ. ಆರೋಪಿ ಸುಳಿವು ನೀಡುವವರು ಎನ್.ಐ.ಎ ನ ಈ ನಂಬರ್ ಗೆ ಸಂಪರ್ಕಿಸಬಹುದು ಎಂದು 080289510999-89042441100 ನಂಬರನ್ನು ನೀಡಿದೆ. ಮಾಹಿತಿ ನೀಡಿದ ಬಾತ್ಮೀದಾರರ ಮಾಹಿತಿ ಗೌಪ್ಯತೆ ಕಾಪಾಡಲಾಗುವುದು ಎಂದು ಭರವಸೆ ನೀಡಿದೆ.



